ಮಧ್ಯಪ್ರದೇಶದ ಸಿಧಿ ಎಂಬಲ್ಲಿ ಬುಡಕಟ್ಟು ಯುವಕನ ಮೇಲೆ ಬಿಜೆಪಿ ಮುಖಂಡ ಪ್ರವೇಶ್ ಶುಕ್ಲಾ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ಇಡೀ ದೇಶದಲ್ಲೊಂದು ಚರ್ಚೆಯನ್ನು ಹುಟ್ಟು ಹಾಕಿದೆ. ಅಲ್ಲದೇ ಈ ಘಟನೆ ಬಗ್ಗೆ ದೊಡ್ಡ ಮಟ್ಟದಲ್ಲಿ ಸಾರ್ವಜನಿಕರಿಂದ ಅಸಮಾಧಾನ, ಆಕ್ರೋಶ ಹೊರ ಬಂದಿದೆ. ಇಂತಹ ನೀಚತನ ಮೆರೆದ ಆರೋಪಿಯ ಮೇಲೆ ಸರ್ಕಾರ ಮತ್ತು ಆಡಳಿತ ಕಠಿಣ ನಿಲುವನ್ನು ತಳೆದಿದೆ. ಆರೋಪಿಯ ಮನೆಯ ಮೇಲೆ ಆಡಳಿತ ಮಂಡಳಿ ಬುಲ್ಡೋಜರ್ ಓಡಿಸಿ, ಪ್ರವೇಶ್ ಶುಕ್ಲಾ ಮನೆಯನ್ನು ಕೆಡವಿ ಹಾಕಲಾಗಿದೆ.
ಮನೆಯನ್ನು ಒಡೆಯುವುದನ್ನು ನೋಡಿ ಆರೋಪಿಯ ತಾಯಿ ಪ್ರಜ್ಞೆ ತಪ್ಪಿದ್ದಾರೆ. ಇನ್ನು ಈ ಘಟನೆಯ ಬಗ್ಗೆ ರಾಜಕೀಯ ವಲಯದಲ್ಲಿ ಬಿಸಿ ಏರಿದೆ. ಕಾಂಗ್ರೆಸ್ ಮುಖಂಡರು ಇಡೀ ಮನೆ ಕೆಡವುವಂತೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದಾರೆ. ಸ್ಥಳೀಯ ಬಿಜೆಪಿ ಶಾಸಕ ಕೇದಾರನಾಥ್ ಶುಕ್ಲಾ ಸಹಾ ಸಂತ್ರಸ್ತರ ಮನೆಗೆ ತಲುಪಿದ್ದಾರೆ. ಇದೆಲ್ಲದರ ನಡುವೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಗುರುವಾರ ಮಧ್ಯಾಹ್ನ 2 ಗಂಟೆಗೆ ಸಂತ್ರಸ್ತರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಯ ಮನೆಯನ್ನು ಕೆಡವಲು ಬುಲ್ಡೋಜರ್ ಬಂದಾಗ ಆರೋಪಿಯ ತಂದೆ ತನ್ನ ಮಗ ಇಂತಹ ಕೆಲಸವನ್ನು ಮಾಡಲು ಸಾಧ್ಯವೇ ಇಲ್ಲ ಎಂದರೆ, ಪ್ರವೇಶ್ ಶುಕ್ಲಾ ಸಹೋದರಿಯು ಅದು ಹಳೆಯ ವೀಡಿಯೋ, ಈಗ ಚುನಾವಣೆ ಹತ್ತಿರ ಆಗಿರುವುದರಿಂದ ಈಗ ಹೊರಗೆ ಬರುವಂತೆ ಮಾಡಲಾಗಿದೆಯೆಂದು ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಮುಖಂಡರು ಸಂತ್ರಸ್ತರ ಮನೆಗೆ ಆಗಮಿಸಿ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ್ದಾರೆ.