ಆದಿಪುರುಷ ಸಿನಿಮಾ ಬಿಡುಗಡೆಯ ನಂತರ ವಿವಾದಾತ್ಮಕ ಸಿನಿಮಾ ಆಗಿ ಸುದ್ದಿಯಾಗಿದೆ. ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಮತ್ತು ಮಾಧ್ಯಮಗಳ ಮುಖಾಂತರ ಪ್ರೇಕ್ಷಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಅಲ್ಲದೇ ಸಿನಿಮಾ ವಿರುದ್ಧ ಹಿಂದೂ ಪರ ಸಂಘಟನೆಗಳು ಕೋರ್ಟ್ ಮೆಟ್ಟಿಲನ್ನು ಸಹಾ ಸೇರಿವೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಬಗ್ಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಮಿತಿಯೊಂದನ್ನು ರಚನೆ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆಯನ್ನು ಜಾರಿ ಮಾಡಿದೆ. ಅಲ್ಲದೇ ಜುಲೈ 27 ರ ಒಳಗೆ ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ಸಂಭಾಷಣಕಾರರಿಗೆ ಕೋರ್ಟ್ ಮುಂದೆ ಹಾಜರಾಗುವಂತೆ ಸೂಚನೆಯನ್ನು ನೀಡಿದೆ.
ಆದಿಪುರುಷ ಸಿನಿಮಾಕ್ಕೆ ನಿಷೇಧ ಹೇರಬೇಕೆಂದು ಮನವಿ ಮಾಡುತ್ತಾ ಕುಲದೀಪ್ ತಿವಾರಿ ಹಾಗೂ ನವೀನ್ ಧವನ್ ಅವರನ್ನು ಒಳಗೊಂಡ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನಡೆಸಿದಂತಹ ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾಣ್ ಹಾಗೂ ಪ್ರಕಾಶ್ ಸಿಂಗ್ ಅವರನ್ನು ಒಳಗೊಂಡ ರಜಾಕಾಲದ ನ್ಯಾಯ ಪೀಠವು ಆದೇಶವನ್ನು ಜಾರಿ ಮಾಡಿದೆ. ಆದಿಪುರುಷ ಸಿನಿಮಾದ ನಿರ್ದೇಶಕ ಓಂ ರಾವತ್, ನಿರ್ಮಾಪಕ ಭೂಷಣ್ ಕುಮಾರ್ ಹಾಗೂ ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿರುವ ಮನೋಜ್ ಮುಂತಾಶಿರ್ ಮೂವರೂ ಜುಲೈ 27ರ ಮೊದಲು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶ ನೀಡಲಾಗಿದೆ.
ಸಾರ್ವಜನಿಕರ ಭಾವನೆಗಳಿಗೆ ಈ ಸಿನಿಮಾದಿಂದ ಧಕ್ಕೆ ಉಂಟಾಗಿದೆಯೇ ಎಂಬ ವಿಚಾರವಾಗಿ ತನ್ನ ಅಭಿಪ್ರಾಯವನ್ನು ನೀಡಲು ಐದು ಜನ ಸದಸ್ಯರ ಸಮಿತಿ ಒಂದನ್ನು ರಚಿಸುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಆದಿಪುರುಷ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡುವ ತನ್ನ ನಿರ್ಧಾರದ ಬಗ್ಗೆ ಪುನರ್ ಪರಿಶೀಲನೆ ನಡೆಸುವಂತೆಯೂ ನ್ಯಾಯಾಲಯವು ಸರ್ಕಾರಕ್ಕೆ ಪ್ರತ್ಯೇಕ ಆದೇಶ ಒಂದರಲ್ಲಿ ತಿಳಿಸಿದೆ. ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ನ ವೆಬ್ಸೈಟ್ನಲ್ಲಿ ಶುಕ್ರವಾರ ರಾತ್ರಿ ಪ್ರಕಟಣೆ ಮಾಡಲಾಗಿದೆ.