Missing Girls : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ತಾನು ನೀಡಿದ್ದ ಐದು ಭರವಸೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿದ್ದು, ರಾಜ್ಯದಲ್ಲಿ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯವನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರವಾಗಿ ಪ್ರತಿದಿನವೂ ಸಹಾ ಮಾದ್ಯಮಗಳಲ್ಲಿ ಸುದ್ದಿಗಳಾಗುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ತೀರ್ಥ ಕ್ಷೇತ್ರಗಳಿಗೆ ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿರುವುದು ಸಾಮಾನ್ಯವಾಗಿದೆ.
ಈಗ ಉಚಿತ ಬಸ್ ಪ್ರಯಾಣದಿಂದಾಗಿ ಸಣ್ಣ ಪುಟ್ಟ ವಿಚಾರಗಳಿಗೆ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋಗುವ ಮಕ್ಕಳು ಸಹಾ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಮುಂದಾಗಿರುವ ವಿಲಕ್ಷಣ ಘಟನೆಯೊಂದು ಬೆಂಗಳೂರಿನ ಕೋಣನ ಕುಂಟೆಯಲ್ಲಿ ನಡೆದಿದೆ. ಕೋಣನ ಕುಂಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆಂದು ಪೋಷಕರು ಪೋಲಿಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡ ಪೋಲಿಸರು ಕಾರ್ಯಾಚರಣೆ ಆರಂಭಿಸಿದ ನಂತರವೂ ಎರಡು ದಿನಗಳಾದರೂ ಇಬ್ಬರು ಹೆಣ್ಣು ಮಕ್ಕಳು ಮನೆಗೆ ಬಂದಿಲ್ಲ. ಅವರು ಎಲ್ಲಿದ್ದಾರೆನ್ನುವ ಸುಳಿವು ಸಿಕ್ಕಿಲ್ಲ. ಅನಂತರ ಎರಡು ದಿನಗಳಾದ ಮೇಲೆ ಇಬ್ಬರೂ ಹುಡುಗಿಯರು ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದು, ನಾಪತ್ತೆಯಾಗಿದ್ದ ಇಬ್ಬರೂ ಮಕ್ಕಳನ್ನು ಪೋಲಿಸರು ತಮ್ಮ ವಶಕ್ಕೆ ಪಡೆದಿದ್ದು, ಅವರನ್ನು ಮನೆ ಬಿಟ್ಟು ಬರಲು ಕಾರಣ ಕೇಳಿದ್ದಾರೆ.
ಈ ವೇಳೆ ಇಬ್ಬರು ಹೆಣ್ಣು ಮಕ್ಕಳು ಅಪ್ಪ ಚಾಕಲೇಟ್ ಗೆ ಹಣ ಕೊಡಲಿಲ್ಲ, ನಮ್ಮ ಮೇಲೆ ರೇಗಾಡಿದರು. ಅದಕ್ಕೆ ನಾವು ಕೋಪದಿಂದ ಬಸ್ ಹತ್ತಿ ಇಲ್ಲಿಗೆ ಬಂದಿದ್ದೇವೆ. ಹೇಗೂ ಫ್ರಿ ಟಿಕೆಟ್ ಇರೋದ್ರಿಂದ ಧರ್ಮಸ್ಥಳಕ್ಕೆ ಬಂದಿದ್ದೀವಿ ಎಂದು ಹೇಳಿ ಶಾಕ್ ನೀಡಿದ್ದಾರೆ. ಕೋಣನ ಕುಂಟೆಯಿಂದ ಧರ್ಮಸ್ಥಳಕ್ಕೆ ತಲುಪಿದ್ದ ಇಬ್ಬರು ಹುಡುಗಿಯರನ್ನು ಸಹಾ ಜೂನ್ 18 ರಂದು ಧರ್ಮಸ್ಥಳದಲ್ಲಿ ಪತ್ತೆ ಮಾಡಲಾಗಿದ್ದು, ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.