ಮಧ್ಯ ಪ್ರದೇಶದಲ್ಲಿ ಆದಿವಾಸಿ ಸಮುದಾಯದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣಕ್ಕೆ ದೇಶವ್ಯಾಪಿಯಾಗಿ ತೀವ್ರವಾದ ಖಂಡನೆ ವ್ಯಕ್ತವಾದ ಬೆನ್ನಲ್ಲೇ, ಆರೋಪಿಯನ್ನು ಬಂಧಿಸಲಾಗಿದೆ. ಇದೇ ವೇಳೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಹಾ ಈ ಘಟನೆಯನ್ನು ಖಂಡಿಸಿರುವುದು ಮಾತ್ರವೇ ಅಲ್ಲದೇ ಅವರು ಸಂತ್ರಸ್ತನ ಪಾದವನ್ನು ತೊಳೆಯುವ ಮೂಲಕ ಗೌರವವನ್ನು ಸಲ್ಲಿಸಿದ್ದಾರೆ ಮತ್ತು ಘಟನೆಗಾಗಿ ಕ್ಷಮೆಯನ್ನು ಯಾಚಿಸಿದ್ದಾರೆ.
ಬುಡಕಟ್ಟು ವ್ಯಕ್ತಿ ದಶಮತ್ ರಾವತ್ ಅವರನ್ನು ಸಿಎಂ ತಮ್ಮ ನಿವಾಸಕ್ಕೆ ಕರೆದೊಯ್ದು, ಅಲ್ಲಿ ಅವರ ಪಾದವನ್ನು ನೀರಿನಿಂದ ತೊಳೆದಿದ್ದಾರೆ. ಅನಂತರ ಘಟನೆಗೆ ಬೇಸರ ವ್ಯಕ್ತಪಡಿಸಿರುವ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು, ವೀಡಿಯೋ ನೋಡಿ ನನಗೆ ನೋವಾಯಿತು. ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಜನರು ನನಗೆ ದೇವರಿದ್ದಂತೆ ಎಂದು ಸಂತ್ರಸ್ತ ದಶಮತ್ ರಾವತ್ ಬಳಿ ಕ್ಷಮೆಯನ್ನು ಯಾಚಿಸಿದ್ದಾರೆ. ಪ್ರವೇಶ್ ಶುಕ್ಲಾ ಎಂಬಾತ ಬುಡಕಟ್ಟು ಸಮುದಾಯದ ರಾವತ್ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈಗಾಗಲೇ ಸ್ಥಳೀಯ ಅಧಿಕಾರಿಗಳು ಆರೋಪಿ ಪ್ರವೇಶ್ ಶುಕ್ಲಾ ಅವರ ತಂದೆಗೆ ಸೇರಿದ ಮನೆಯ ಅಕ್ರಮ ಭಾಗವನ್ನು ನೆಲಸಮ ಮಾಡಿದ್ದಾರೆ.
ಮಧ್ಯಪ್ರದೇಶ ಸಿಎಂ ಅವರು ನೀಡಿದಂತಹ ನಿರ್ದೇಶನದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾಯಿದೆ ಅಡಿಯಲ್ಲಿ ಸ್ಥಳೀಯ ಪೊಲೀಸರು ಪ್ರವೇಶ್ ಶುಕ್ಲಾ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.