ದಕ್ಷಿಣ ಸಿನಿಮಾ ರಂಗದ ಹಿರಿಯ ನಟ, ತಮಿಳು ಸಿನಿಮಾ ರಂಗದಲ್ಲಿ ಸೂಪರ್ಸ್ಟಾರ್ ಖ್ಯಾತಿಯನ್ನು ಪಡೆದುಕೊಂಡಿರುವ ನಟ ರಜನಿಕಾಂತ್ ಅವರ ಅಭಿನಯದ ಬಹುನಿರೀಕ್ಷಿತ ‘ಜೈಲರ್’ ಸಿನಿಮಾಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇದೀಗ ಜೈಲರ್ ಚಿತ್ರಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ. ಹೌದು, ಜೈಲರ್ ಸಿನಿಮಾ ಟೈಟಲ್ ವಿಚಾರವಾಗಿ ಗೊಂದಲ ಉಂಟಾಗಿದ್ದು,ಎರಡು ಸಿನಿಮಾಗಳು ಒಂದೇ ಟೈಟಲ್ ಅನ್ನು ಹೊಂದಿರುವುದು ಇಂತಹುದೊಂದು ಗೊಂದಲಕ್ಕೆ ಈಗ ಕಾರಣವಾಗಿದೆ.
ರಜನಿಕಾಂತ್ ಅವರು ನಾಯಕನಾಗಿರುವ ‘ಜೈಲರ್’ ಸಿನಿಮಾದ ತಂಡವು ಈಗಾಗಲೇ ಆಗಸ್ಟ್ 10, 2023 ರಂದು ಈ ಸಿನಿಮಾವನ್ನು ಅದ್ಧೂರಿಯಾಗಿ ತೆರೆ ಮೇಲೆ ತರಲು ಸಿದ್ಧತೆಗಳನ್ನು ನಡೆಸಿದ್ದು, ಸಿನಿಮಾ ಬಿಡುಗಡೆಯ ದಿನಾಂಕವನ್ನು ಸಹಾ ಅಧಿಕೃತವಾಗಿ ಘೋಷಣೆ ಮಾಡಿದೆ. ಆದರೆ ಇವೆಲ್ಲವುಗಳ ನಡುವೆಯೇ ಹೊಸ ಸಮಸ್ಯೆಯೊಂದು ಉಂಟಾಗಿದ್ದು, ಮಲಯಾಳಂ ಚಿತ್ರತಂಡವೊಂದು ತಮ್ಮ ಸಿನಿಮಾಕ್ಕೂ ಕೂಡಾ ಇದೇ ಟೈಟಲ್ ಅಂದರೆ ಜೈಲರ್ ಎಂದು ಟೈಟಲ್ ಇಟ್ಟುಕೊಂಡಿರುವುದು ಈಗ ಸಮಸ್ಯೆಯಾಗಿ ಪರಿಣಮಿಸಿದೆ.
ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಹಾಗೂ ಮಲೆಯಾಳಂನಲ್ಲಿ ಧ್ಯಾನ್ ಶ್ರೀನಿವಾಸನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಜೈಲರ್ ಶೀರ್ಷಿಕೆಯನ್ನು ಹೊಂದಿದ್ದು, ಇನ್ನೊಂದು ಕಡೆ ತಲೈವಾ ರಜನಿಕಾಂತ್ ನಟನೆಯ ಸಿನಿಮಾಗೂ ಅದೇ ಟೈಟಲ್ ಅನ್ನು ಬಳಸಿಕೊಳ್ಳಲಾಗಿದೆ. ಹೀಗೆ ಎರಡು ಸಿನಿಮಾಗಳ ಟೈಟಲ್ ಒಂದೇ ಇರುವುದರಿಂದ ಇದು ಸಮಸ್ಯೆಗೆ ಕಾರಣವಾಗುವುದೆಂದು ಕಳವಳ ವ್ಯಕ್ತಪಡಿಸಿರುವ ಮಲಯಾಳಂ ನಿರ್ಮಾಪಕರು, ಕನಿಷ್ಠ ಪಕ್ಷ ರಜನೀಕಾಂತ್ ಅವರ ಜೈರಲ್ ಸಿನಿಮಾದ ಟೈಟಲ್ ಅನ್ನು ಕೇರಳದಲ್ಲಾದರೂ ಬದಲಾಯಿಸಿಕೊಳ್ಳಿ ಎಂದು ಜೈಲರ್ ತಂಡಕ್ಕೆ ಮನವಿಯನ್ನು ಮಾಡಿಕೊಂಡಿದ್ದಾರೆ.