ನಮ್ಮ ಪುರಾಣ ಕಥೆಗಳಲ್ಲಿ ವಿಘ್ನ ನಿವಾರಕ ಗಣೇಶನ ಕಥೆ ಬಂದಾಗ, ಮಹಾಶಿವನು ಕೋಪದಿಂದ ಗಣೇಶನ ಶಿರವನ್ನು ದೇಹದಿಂದ ಬೇರ್ಪಡಿಸಿ ಅನಂತರ ಆನೆಯ ತಲೆಯನ್ನು ಜೋಡಿಸಿ ಗಣೇಶನಿಗೆ ಮರು ಜೀವ ನೀಡಿದ ಕಥೆಗನ್ನು ನಾವೆಲ್ಲಾ ಕೇಳಿದ್ದೇವೆ. ಈಗ ಕಲಿಯುಗದಲ್ಲಿ ಸಹಾ ಅಪಘಾತದಲ್ಲಿ ತಂಡಾಗಿದ್ದ ಬಾಲಕನ ತಲೆಯನ್ನು ಮತ್ತೆ ಜೋಡಿಸಿ, ಬಾಲಕನ ಪ್ರಾಣ ಉಳಿಸಿದ ಘಟನೆ ನಡೆದಿದ್ದು, ವೈದ್ಯರ ಸಾಧನೆಗೆ ಮೆಚ್ಚುಗೆಗಳು ಹರಿದು ಬರುತ್ತಿದೆ.
ಇಂತಹುದೊಂದು ಅಪರೂಪದ ಚಿಕಿತ್ಸೆ ಮಾಡಿದವರು ಇಸ್ರೇಲ್ ನ ವೈದ್ಯರಾಗಿದ್ದಾರೆ. ಇಲ್ಲಿನ ವೈದ್ಯರು ಒಂದು ಸಂಕೀರ್ಣವಾದ ಶಸ್ತ್ರ ಚಿಕಿತ್ಸೆಯನ್ನು ನಡೆಸಿ ಬಾಲಕನ ತಲೆಯನ್ನು ಮರುಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಜೆರೆಸಲೇಮ್ ಆಸ್ಪತ್ರೆ ಪ್ರಕಟಿಸಿದೆ. 12 ವರ್ಷದ ಬಾಲಕನಾದ ಸುಲೈಮಾನ್ ಹಸನ್ ಬೈಸಿಕಲ್ ನಲ್ಲಿ ಹೋಗುತ್ತಿದ್ದ ವೇಳೆ ಆತನಿಗೆ ಕಾರು ಡಿಕ್ಕಿ ಹೊಡೆದು ತಲೆ ತುಂಡಾಗಿತ್ತು ಎನ್ನಲಾಗಿದೆ.
ಈ ಅಪಘಾತದ ನಂತರ ಸುಲೈಮಾನ್ ಹಸನ್ನನ್ನು ವೆಸ್ಟ್ ಬ್ಯಾಂಕ್ ನಿಂದ ಹದಸ್ಸಾ ವೈದ್ಯಕೀಯ ಕೇಂದ್ರಕ್ಕೆ ತುರ್ತಾಗಿ ವಿಮಾನದ ಮೂಲಕ ಕೊಂಡೊಯ್ಯಲಾಗಿತ್ತು. ವೈದ್ಯರು ತಪಾಸಣೆ ನಡೆಸಿದಾವ ಬಾಲಕನ ತಲೆಬುರುಡೆಯ ಹಿಂಭಾಗದ ತಳವನ್ನು ಹಿಡಿದಿರುವ ಅಸ್ಥಿರಜ್ಜುಗಳು ಹೆಚ್ಚು ಹಾನಿಗೊಳಗಾಗಿದೆ ಎಂದು ತಿಳಿದು ಬಂದಿದೆ. ಆಸ್ಪತ್ರೆಯಲ್ಲಿ ವೈದ್ಯರು ತಮ್ಮೆಲ್ಲಾ ಸಾಮರ್ಥ್ಯವನ್ನು ಬಳಸಿ, ಹಲವು ಗಂಟೆಗಳ ಶಸ್ತ್ರಚಿಕಿತ್ಸೆ ನಂತರ ಬಾಲಕನ ಪ್ರಾಣವನ್ನು ಉಳಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯು ಬದುಕುವ ಅವಕಾಶ 50% ಎನ್ನಲಾಗಿದ್ದು, ಬಾಲಕನಲ್ಲಿ ಕಂಡು ಬರುತ್ತಿರುವ ಚೇತರಿಕೆ ಒಂದು ಪವಾಡವೇ ಸರಿ ಎಂದು ವೈದ್ಯರು ಹೇಳಿದ್ದಾರೆ. ಶಸ್ತ್ರಚಿಕಿತ್ಸೆ ಕಳೆದ ತಿಂಗಳೇ ನಡೆದಿದ್ದರೂ ಸಹಾ ವೈದ್ಯರು ಜುಲೈವರೆಗೂ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ. ಸುಲೈಮಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಕುತ್ತಿಗೆಗೆ ಕಟ್ಟು ಪಟ್ಟಿ ಧರಿಸುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.