ಬರೋಬ್ಬರಿ 22 ವರ್ಷಗಳ ಹಿಂದೆ ತೆರೆಗೆ ಬಂದು ದೊಡ್ಡ ಸಂಚಲನ ಸೃಷ್ಟಿಸಿದ್ದ ಬಾಲಿವುಡ್ ಸಿನಿಮಾ ಗದರ್. ಈಗ ಆ ಸಿನಿಮಾದ ನಾಯಕ ನಾಯಕಿಯಾಗಿದ್ದ, ಸನ್ನಿ ಡಿಯೋಲ್, ಅಮೀಶಾ ಪಟೇಲ್ ಜೋಡಿಯನ್ನೇ ಮತ್ತೊಮ್ಮೆ ʼಗದರ್ -2ʼ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ತರಲು ಎಲ್ಲಾ ಸಿದ್ಧತೆಗಳು ನಡೆದಿದೆ. ಅಂದು ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿದ್ದ ಗದರ್ ನ ತಾರಾ ಸಿಂಗ್ ಹಾಗೂ ಸಕೀನಾ ಜೋಡಿಯನ್ನು ಈಗ ಮತ್ತೊಮ್ಮೆ ಹೊಸ ರೂಪದಲ್ಲಿ ನೋಡಲು ಸಿನಿ ಪ್ರೇಮಿಗಳು ಕಾಯುತ್ತಿದ್ದಾರೆ.
ಸಿನಿಮಾದ ನಾಯಕಿ ಅಮೀಶಾ ಪಟೇಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಟ್ ಲುಕ್ ನ ಫೋಟೋಗಳನ್ನು ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾರೆ. ಈಗ ನಟಿಯು ಗದರ್ 2 ಸಿನಿಮಾ ಹತ್ತಿರದಲ್ಲಿರುವಾಗಲೇ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಣ ತಂಡದ ಮೇಲೆ ಆರೋಪ ಮಾಡುವ ಮೂಲಕ ಈಗ ಅಚ್ಚರಿಯನ್ನು ಮೂಡಿಸಿದೆ. ನಟಿಯು ಸರಣಿ ಟ್ವೀಟ್ ಗಳ ಮೂಲಕ ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ.
ನಿರ್ದೇಶಕ ಅನಿಲ್ ಶರ್ಮಾ ಹಾಗೂ ಪ್ರೊಡಕ್ಷನ್ ತಂಡ ಮಾಡಿದ ತಪ್ಪು ನಿರ್ವಹಣೆಯಿಂದಾಗಿ ಅನೇಕರಿಗೆ ಸಮಸ್ಯೆ ಉಂಟಾಗಿದೆ. ಸಿನಿಮಾದಲ್ಲಿನ ಮೇಕಪ್ ಕಲಾವಿದರು, ವಸ್ತ್ರ ವಿನ್ಯಾಸಕರು ಮತ್ತು ಅನೇಕ ತಂತ್ರಜ್ಞರು ಅನಿಲ್ ಶರ್ಮಾ ಪ್ರೊಡಕ್ಷನ್ಸ್ನಿಂದ ಸರಿಯಾದ ಸಂಭಾವನೆಯನ್ನಾಗಲೀ, ಬಾಕಿಯನ್ನಾಗಲೀ ಪಡೆದಿರಲಿಲ್ಲ. ಆದರೆ ಜೀ ಸ್ಟುಡಿಯೋಸ್ ವೃತ್ತಿಪರ ಕಂಪನಿಯಾಗಿದ್ದು, ಎಲ್ಲಾ ಬಾಕಿಗಳನ್ನು ಇತ್ಯರ್ಥ ಮಾಡಲಾಗಿದೆ.
ನಟಿಯು ತಮ್ಮ ಟ್ವೀಟ್ ನಲ್ಲಿ, ಅನಿಲ್ ಶರ್ಮಾ ಪ್ರೊಡಕ್ಷನ್ಸ್ ವಸತಿಯಿಂದ ಹಿಡಿದು, ಕೊನೆಯ ದಿನದಂದು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಆಹಾರದ ಬಿಲ್ಗಳನ್ನು ಸಹಾ ಪಾವತಿಸಿರಲಿಲ್ಲ. ಕೆಲವು ಪಾತ್ರವರ್ಗ ಮತ್ತು ಸಿಬ್ಬಂದಿ ಸದಸ್ಯರಿಗೆ ಕಾರುಗಳನ್ನು ಒದಗಿಸಲಿಲ್ಲ ಆಗ ಮತ್ತೊಮ್ಮೆ, ಜೀ ಸ್ಟುಡಿಯೋಸ್ ಮಧ್ಯ ಪ್ರವೇಶ ಮಾಡಿ ಎದುರಾಗಿದ್ದ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಿತು ಎಂದು ಹೇಳಿದ್ದಾರೆ.