ಕನ್ನಡ ಸಿನಿಮಾ ರಂಗದ ಮೋಹಕ ತಾರೆ ಖ್ಯಾತಿಯ ನಟಿ ರಮ್ಯಾ ಸ್ಯಾಂಡಲ್ವುಡ್ ಗೆ ಕಮ್ ಬ್ಯಾಕ್ ಮಾಡಿದ್ದಾರೆ. ನಟಿ ಉತ್ತರಾಕಾಂಡ ಸಿನಿಮಾದ ಮೂಲಕ ಅಭಿಮಾನಿಗಳ ಮೇಲೆ ಮೋಡಿ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಇವೆಲ್ಲವುಗಳ ನಡುವೆ ಈಗ ತಮಿಳಿನ ಸ್ಟಾರ್ ನಟ ಸೂರ್ಯ ಜೊತೆಗಿನ ತಮ್ಮ ಒಂದು ಫೋಟೋವನ್ನು ಹಂಚಿಕೊಂಡು, ಅವರ ಜೊತೆ ನಟಿಸಿದ ಸಿನಿಮಾವನ್ನು ಸ್ಮರಿಸುತ್ತಾ, ಅದರ ಕುರಿತಾಗಿ ನಟಿ ಮಾತನಾಡಿದ್ದಾರೆ. ರಮ್ಯ ಅವರು ತಮ್ಮ 20 ವರ್ಷಗಳ ಸಿನಿಮಾ ಪಯಣದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳ ಭಾಗವಾಗಿದ್ದಾರೆ.
ಈಗ ರಮ್ಯಾ ಅವರು ನಟ ಸೂರ್ಯ ಜೊತೆಗಿನ ತಮ್ಮ ಸಿನಿಮಾ ಬಗ್ಗೆ ಅನುಭವ ಶೇರ್ ಮಾಡಿಕೊಂಡಿದ್ದಾರೆ. ಪ್ರಸ್ತುತ ನಟಿ ರಮ್ಯಾ ಅವರು ವಿದೇಶದಲ್ಲಿದ್ದು, ಹೊಸ ಸಿನಿಮಾಕ್ಕಾಗಿ ತಮ್ಮ ಫಿಟ್ನೆಸ್ ಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಲಿದ್ದಾರೆ. ಡಾಲಿ ಜೊತೆಗೆ ತೆರೆಯ ಮೇಲೆ ಮಿಂಚಲು ನಟಿ ತಯಾರಿಯನ್ನು ನಡೆಸುತ್ತಿದ್ದಾರೆ. ರಮ್ಯಾ ಅವರು ತಮ್ಮ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ನಟಿಯಾಗಿ ಮಾತ್ರವೇ ಅಲ್ಲದೇ ನಿರ್ಮಾಪಕಿಯಾಗಿಯೂ ಕೂಡಾ ಸ್ಯಾಂಡಲ್ವುಡ್ ನಲ್ಲಿ ಮಿಂಚುತ್ತಿದ್ದಾರೆ.
ರಮ್ಯಾ ಅವರು ನಟ ಸೂರ್ಯ ಜೊತೆಗೆ 2008ರ ಲ್ಲಿ ‘ಸೂರ್ಯ ಸನ್ ಆಫ್ ಕೃಷ್ಣಮೂರ್ತಿ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಯಶಸ್ಸು ನಟಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ಈ ಸಿನಿಮಾ ಮೂಲಕ ಅವರು ತಮಿಳು ಸಿನಿಮಾ ರಂಗದಲ್ಲಿ ದಿವ್ಯ ಸ್ಪಂದನ ಹೆಸರಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಪ್ರಿಯಾ ಪಾತ್ರ ಇನ್ನೂ ಜನರ ಮನಸ್ಸಿನಲ್ಲಿ ಹಸಿರಾಗಿದೆ. ಈ ಸಿನಿಮಾದಲ್ಲಿ ನಟಿಯ ಪ್ರಿಯಾ ಪಾತ್ರವನ್ನು ಜನರು ಇನ್ನೂ ಮರೆತಿಲ್ಲ. ಈಗ ರಮ್ಯಾ ಅವರು ಇದೇ ಸಿನಿಮಾದ ಫೋಟೋ ಶೇರ್ ಮಾಡುತ್ತಾ ಕೆಲವೊಂದು ಸಾಲುಗಳನ್ನು ಬರೆದುಕೊಂಡಿದ್ದಾರೆ.
ಈ ಚಿತ್ರದಲ್ಲಿ ನಟಿಸುವುದು ಬಹಳ ಇಷ್ಟವಾಯಿತು. ಈ ಚಿತ್ರದಲ್ಲಿ ಕೆಲಸ ಮಾಡುವಾಗ ನನಗೆ 22 ವರ್ಷ ವಯಸ್ಸಾಗಿತ್ತು. ನಾನು ಹಿಂದೆಂದೂ ಅನುಭವಿಸದಂತಹ ತೀವ್ರವಾದ ಭಾವನೆಗಳನ್ನ ಇಲ್ಲಿ ತೋರಿಸಬೇಕಾಗಿತ್ತು. ನಾನು ಜೀವನ, ಸಂಬಂಧಗಳ ಬಗ್ಗೆ ತುಂಬಾ ಕಲಿತಿದ್ದೇನೆ. ಮತ್ತು ನನಗೆ ಪ್ರಿಯಾ ಯಾವಾಗಲೂ ತಾಳ್ಮೆ ಮತ್ತು ಪ್ರೀತಿಯ ಸಾರಾಂಶವಾಗಿದ್ದಾಳೆ. ಆಕೆಯ ಹಾಗೆ ನಾನು ಪ್ರೀತಿಸಬಹುದೆಂದು ನಾನು ಬಯಸುತ್ತೇನೆ. ಜುಲೈ 21ರಂದು ಈ ರಾಷ್ಟ್ರೀಯ ಪ್ರಶಸ್ತಿ ವಿಜೇತ, ಕಲ್ಟ್-ಕ್ಲಾಸಿಕ್ನ ಮ್ಯಾಜಿಕ್ ಅನ್ನು ನೀವು ಆನಂದಿಸಿ ಎಂದು ರಮ್ಯಾ ಬರೆದುಕೊಂಡಿದ್ದಾರೆ.