ಕನ್ನಡ ಚಿತ್ರರಂಗದ ಜನಪ್ರಿಯ ನಟ, ಸ್ಟಾರ್ ನಟ ಆಗಿರುವ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನ ವಿಜಯ ರಾಘವೇಂದ್ರ ಅವರು ನಿಧನರಾಗಿದ್ದಾರೆ. ಸ್ಪಂದನ ಅವರು ವಿದೇಶದಲ್ಲಿ ಇಂದು ಹೃದಯಘಾತದಿಂದ ನಿಧನರಾಗಿದ್ದಾರೆ ಎನ್ನುವುದು ತಿಳಿದು ಬಂದಿದೆ. ಸ್ಪಂದನ ಅವರ ಅಗಲಿಕೆಯ ವಿಷಯ ಈಗ ಸುದ್ದಿಯಾಗಿದ್ದು, ಈ ಸುದ್ದಿ ಕೇಳಿ ನಟನ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳ ಮೂಲಕ ಕಂಬನಿ ಮಿಡಿದಿದ್ದಾರೆ. ಸ್ಪಂದನ ಅವರು ತಮ್ಮ ಪತಿ ವಿಜಯ ರಾಘವೇಂದ್ರ ಅವರ ಜೊತೆಗೆ ಬ್ಯಾಂಕಾಕ್ ಗೆ ಹೋಗಿದ್ದರು.
ಈ ವೇಳೆ ಅವರಿಗೆ ಹೃದಯಾಘಾತವಾಗಿದೆ ಎನ್ನಲಾಗಿದೆ. ಅಲ್ಲದೇ ಸ್ಪಂದನ ಅವರಿಗೆ ಲೋ ಬಿಪಿ ಇದ್ದುದ್ದು ಅವರ ಸಾವಿಗೆ ಕಾರಣವಾಯಿತು ಎಂದು ಸಹಾ ಹೇಳಲಾಗಿದೆ. ಸ್ಪಂದನ ಅವರ ಈ ಅನಿರೀಕ್ಷಿತ ಅಗಲಿಕೆಯು ಇಡೀ ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತಕಾರಿ ಸುದ್ದಿಯಾಗಿದೆ.
ವಿಜಯ ರಾಘವೇಂದ್ರ ಮತ್ತು ಸ್ಪಂದನ ಅವರದ್ದು ಪ್ರೇಮ ವಿವಾಹವಾಗಿದ್ದು, 2007 ಆಗಸ್ಟ್ 26 ರಂದು ಅವರು ಸಪ್ತಪದಿ ತುಳಿದಿದ್ದರು.
ಅವರ ಹದಿನಾರನೇ ವಿವಾಹ ವಾರ್ಷಿಕೋತ್ಸವಕ್ಕೆ ಇನ್ನು ಹತ್ತೊಂಬತ್ತು ದಿನಗಳಿದ್ದವು. ಆದರೆ ಅದಕ್ಕೂ ಮೊದಲೇ ಇಂತಹುದೊಂದು ಅವಘಡ ನಡೆದಿರುವುದು ಬಹಳ ದುಃಖದ ವಿಚಾರವಾಗಿದೆ. ಸ್ಪಂದನ ಅವರು 2013 ರಲ್ಲಿ ತೆರೆಗೆ ಬಂದಿದ್ದ ಅಪೂರ್ವ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಜಯ ರಾಘವೇಂದ್ರ ಮತ್ತು ಸ್ಫಂದನ ದಂಪತಿಗೆ ಓರ್ವ ಪುತ್ರನಿದ್ದಾನೆ.