ಇನ್ಫೋಸಿಸ್ ನ ಸಹ ಸಂಸ್ಥಾಪಕರಾಗಿರುವಂತಹ ನಂದನ್ ನಿಲೇಕಣಿ ಅವರು ಉದ್ಯಮಿಯಾಗಿ ಮಾತ್ರವೇ ಅಲ್ಲದೇ ಅವರು ದಾನ, ಧರ್ಮದಲ್ಲೂ ಕೊಡುಗೈ ದಾನಿ ಆಗಿದ್ದಾರೆ. ಈಗಾಗಲೇ ಅವರು ಹಲವು ಜನೋಪಯೋಗಿ ಕಾರ್ಯಗಳಿಗಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ವಿನಿಯೋಗ ಮಾಡಿದ್ದಾರೆ. ಇದೀಗ ಅವರು ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಡುವ ಮೂಲಕ ಮಾದರಿಯಾಗಿದ್ದು, ತಾವು ಕಲಿತ ಸಂಸ್ಥೆಗೆ ಅವರು ಬಹು ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದ್ದಾರೆ.ಹೌದು, ನಂದನ್ ನಿಲೇಕಣಿ ಅವರು ತಾವು ಶಿಕ್ಷಣವನ್ನು ಪಡೆದಂತಹ ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಾಂಬೆ ಐಐಟಿ) ಗೆ ದೇಣಿಗೆ ನೀಡುತ್ತಿದ್ದಾರೆ.
ನಂದನ್ ನಿಲೇಕಣಿ ಅವರು 1973 ರಲ್ಲಿ ಇದೇ ಕಾಲೇಜಿಗೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಗೆ ಸೇರ್ಪಡೆಗೊಂಡಿದ್ದರು. ಇದೀಗ ಅವರು ತಾವು ಕಲಿತ ಸಂಸ್ಥೆಗೆ ಬರೋಬ್ಬರಿ 315 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಹಿಂದೆಯೂ ಸಹಾ ಅವರು ಈ ಸಂಸ್ಥೆಗೆ 85 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದರು. ಈಗ ಎರಡು ಸಲ ಅವರು ನೀಡಿದ ದೇಣಿಗೆಯ ಒಟ್ಟು ಕೊಡುಗೆ 400 ಕೋಟಿ ರೂಪಾಯಿಗಳಾಗಿದೆ. ದೊಡ್ಡ ಮನಸ್ಸಿನಿಂದ ನಂದನ್ ನಿಲೇಕಣಿ ಅವರು ನೀಡಿರುವ ದೇಣಿಗೆಯ ಹಣವನ್ನು ಬಳಸಿಕೊಂಡು ಬಾಂಬೆ ಐಐಟಿಯಲ್ಲಿ ವಿಶ್ವ ದರ್ಜೆಯ ಮೂಲ ಸೌಕರ್ಯ ಕಲ್ಪಿಸಲು ಉದ್ದೇಶಿಸಲಾಗಿದೆ.