ಶಾಲಾ ವಿದ್ಯಾರ್ಥಿಗಳ ವಿಚಾರ ಬಂದಾಗಲೆಲ್ಲಾ ಅವರು ಪುಸ್ತಕಗಳನ್ನಿಟ್ಟುಕೊಂಡು ಹೊರುವ ಬ್ಯಾಗ್ ನ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಚರ್ಚೆಗಳಾಗಿದೆ. ಅಷ್ಟೊಂದು ತೂಕ ಹೊರುವ ಅಗತ್ಯ ಇದೆಯೇ ಎನ್ನುವ ಪ್ರಶ್ನೆಗಳು ಸಹಾ ಕೇಳಿ ಬಂದಿದೆ. ಈಗ ಒಂದರಿಂದ ಹತ್ತನೇ ತರಗತಿವರೆಗೆ ವಿದ್ಯಾರ್ಥಿಗಳ ಬ್ಯಾಗ್ ನ ತೂಕ ಎಷ್ಟಿರಬೇಕು ಎನ್ನುವುದನ್ನು ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಅನ್ವಯ ಅಗುವಂತೆ ಸರ್ಕಾರವೇ ನಿರ್ಧರಿಸಿದೆ. ಹಾಗಾದರೆ ಯಾವ ತರಗತಿಯ ಮಕ್ಕಳ ಬ್ಯಾಗ್ ಎಷ್ಟು ತೂಕ ಇರಬೇಕು ಎನ್ನುವುದನ್ನು ತಿಳಿಯೋಣ ಬನ್ನಿ.
ಒಂದು ಮತ್ತು 2ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್ ನ ತೂಕ ಒಂದೂವರೆಯಿಂದ ಎರಡು ಕೆಜಿ, 3 ರಿಂದ 5 ನೇ ತರಗತಿ ವರೆಗಿನ ವಿದ್ಯಾರ್ಥಿಗಳ ಬ್ಯಾಗ್ ನ ತೂಕ 2 ರಿಂದ 3 ಕೆಜಿ. 6 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ 3 ರಿಂದ 4 ಕೆಜಿ ಮತ್ತು 9, 10 ತರಗತಿ ವಿದ್ಯಾರ್ಥಿಗಳ ಬ್ಯಾಗ್ ತೂಕ 4 ರಿಂದ 5 ಕೆಜಿ ಎಂದು ಗರಿಷ್ಠ ತೂಕವನ್ನು ನಿಗಧಿ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಆಯುಕ್ತರು ತಿಳಿಸಿದ್ದಾರೆ. ಈ ಭಾರದ ನಿಯಮ ಶಾಲೆಗಳಲ್ಲಿ ಪಾಲನೆ ಆಗುತ್ತಿದೆಯೋ ಇಲ್ಲವೋ ಎನ್ನುವುದನ್ನು ನೋಡಿಕೊಳ್ಳುವ ಜವಾಬ್ದಾರಿ ಕ್ಲಸ್ಟರ್ ಹಂತದ ಸಿಆರ್ಸಿ ಮತ್ತು ಇಸಿಓ ಗಳದ್ದಾಗಿರುತ್ತೆ.
ಬ್ಲಾಕ್ ಹಂತದಲ್ಲಿ ಇದು ಬಿಆರ್ಸಿ ಮತ್ತು ಬಿಇಓ ಗಳದ್ದಾಗಿರುತ್ತದೆ. ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು ಮತ್ತು ಡಯಟ್ ಪ್ರಾಂಶುಪಾಲರಿಗೆ ಜವಾಬ್ದಾರಿ ನೀಡಲಾಗಿದೆ. ಒಂದು ಮತ್ತು ಎರಡನೇ ತರಗತಿಯಲ್ಲಿ ಬುನಾದಿ ಹಂತದ ಶಿಕ್ಷಣ ಇರುವ ಕಾರಣ ಈ ತರಗತಿಗಳ ಮಕ್ಕಳಿಗೆ ಗೃಹಪಾಠ ಅಥವಾ ಮನೆಗೆಲಸವನ್ನು ನೀಡುವ ಹಾಗಿಲ್ಲ. ಒಂದರಿಂದ ಐದನೇ ತರಗತಿವರೆಗೆ ಭಾಷೆ, ಗಣಿತ, ಪರಿಸರ ವಿಜ್ಞಾನ ಬಿಟ್ಟು ಬೇರೆ ಪಠ್ಯಕ್ರಮ ನಿಗಧಿ ಮಾಡುವಂತಿಲ್ಲ.
ಮೂರರಿಂದ ಹತ್ತನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಕಲಿಕಾ ಬಲವರ್ಧನೆಯ ಚಟುವಟಿಕೆಗಳನ್ನು ಶಾಲೆಯಲ್ಲಿಯೇ ಮಾಡಿಸಬೇಕು, ಮನೆಗೆಲಸ ಸೀಮಿತವಾಗಿರಬೇಕು. ಅಲ್ಲದೇ ಒಂದರಿಂದ ಐದನೇ ತರಗತಿವರೆಗೆ ಎನ್ ಸಿ ಇ ಆರ್ ಟಿ ಪಠ್ಯಕ್ರಮ ಹೊರತುಪಡಿಸಿ ಬೇರೆ ಯಾವುದೇ ಪಠ್ಯಕ್ರಮವನ್ನು ನಿಗಧಿ ಪಡಿಸಿ, ಬೋಧಿಸಿದರೆ ಶಾಲೆಗಳ ಮಾನ್ಯತೆ ರದ್ದು ಮಾಡಲು ವಿಶೇಷ ತಂಡ ರಚಿಸಲು ಶಿಕ್ಷಣಾಧಿಕಾರಿಗಳಿಗೆ ಆಯುಕ್ತರು ಸೂಚನೆಗಳನ್ನು ನೀಡಿದ್ದಾರೆ.