Home » ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಾದ್ಯಂತ ಡಾ.ಕೆ.ಸುಧಾಕರ್ ಮಿಂಚಿನ ಸಂಚಾರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಾದ್ಯಂತ ಡಾ.ಕೆ.ಸುಧಾಕರ್ ಮಿಂಚಿನ ಸಂಚಾರ

by Suddi Mane
0 comment

ಬಿಜೆಪಿ – ಜೆಡಿಎಸ್ ಒಗ್ಗಟ್ಟಿನ ಮಂತ್ರ
ವಿಕಸಿತ ಭಾರತ ನಿರ್ಮಿಸುವ ಗುರಿಯೊಂದಿಗೆ ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿಸಲು ರಾಜ್ಯಾದ್ಯಂತ ಚುರುಕಿನ ಚುನಾವಣಾ ಪ್ರಚಾರ ನಡೆಯುತ್ತಿದೆ. ಆದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವಿರುವ ಬಯಲುಸೀಮೆ ಭಾಗದಲ್ಲಿ ಚುನಾವಣಾ ಪ್ರಚಾರದೊಂದಿಗೆ ಬಿರುಸಿನ ರಾಜಕೀಯ ಚಟುವಟಿಕೆ ನಡೆದಿದೆ. ಈ ಬಾರಿ ಬಿಜೆಪಿ-ಜೆಡಿಎಸ್‌ ಮೈತ್ರಿ ಗಟ್ಟಿಯಾಗಿದ್ದು, ಅಭ್ಯರ್ಥಿ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಅವರನ್ನು ಸಂಸದರಾಗಿಸಲು ಮುಖಂಡರು ಹಾಗೂ ಕಾರ್ಯಕರ್ತರು ಒಕ್ಕೊರಲ ವಿಶ್ವಾಸವನ್ನು ತೋರಿಸಿದ್ದಾರೆ.

ಕಳೆದ ಭಾನುವಾರ ಟಿಕೆಟ್ ಘೋಷಣೆಯಾದಾಗಿನಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ನಡೆಸುತ್ತಿರುವ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್, ಮಿತ್ರ ಪಕ್ಷಗಳ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿದ್ದಾರೆ. ಕಳೆದ ಒಂದು ವಾರದಿಂದ ಡಾ.ಕೆ.ಸುಧಾಕರ್ ಅವರು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಹುತೇಕ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಮನೆಗಳಿಗೆ ಖುದ್ದು ಭೇಟಿ ನೀಡಿ ಸಹಕಾರ ಕೋರಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನೂ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಜೆಡಿಎಸ್ ಪ್ರಭಾವ ಹೆಚ್ಚಿರುವ ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲದಲ್ಲಿ ಸೋಮವಾರ ಸಮನ್ವಯ ಸಭೆ ನಡೆಯಲಿದ್ದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉಪಸ್ಥಿತರಿರಲಿದ್ದಾರೆ. ಈಗಾಗಲೇ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಡಾ.ಕೆ.ಸುಧಾಕರ್‌ ಅವರನ್ನು ಅಭ್ಯರ್ಥಿಯಾಗಿಸಲು ಸಂಪೂರ್ಣ ಸಹಕಾರ ನೀಡಿದ್ದು, ಸಹಯೋಗದಲ್ಲಿ ಕಾರ್ಯನಿರ್ವಹಿಸುವ ಸಂದೇಶ ನೀಡಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಇತ್ತೀಚೆಗೆ ಸಭೆ ನಡೆಸಿದ ಡಾ.ಕೆ.ಸುಧಾಕರ್‌, ಅಭಿವೃದ್ಧಿಯ ರಾಜಕಾರಣ, ದೇಶದ ಭದ್ರತೆ ಹಾಗೂ ಯುವಜನರ ಬದುಕು ರೂಪಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ಗುರಿಯೊಂದಿಗೆ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ನನಗೆ ಮತ್ತು ದೊಡ್ಡಬಳ್ಳಾಪುರಕ್ಕೆ ಅವಿನಾಭಾವ ಸಂಬಂಧವಿರುವುದರಿಂದ ಇದು ನನಗೆ ಹೊಸ ಕ್ಷೇತ್ರವಲ್ಲ. ಈ ಕ್ಷೇತ್ರದಲ್ಲಿ ಅನೇಕ ಹಿರಿಯ ನಾಯಕರಿದ್ದಾರೆ. ಅವರೆಲ್ಲರ ಸಹಕಾರ ಪಡೆದಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಸಭೆ ನಡೆಸಿ ಕಾರ್ಯತಂತ್ರಗಳ ಕುರಿತು ಚರ್ಚಿಸಲಾಗಿದೆ. ಹಿರಿಯ ನಾಯಕ ಎಂಟಿಬಿ ನಾಗರಾಜ್‌ ಹಾಗೂ ಶಾಸಕ ಧೀರಜ್‌ ಮುನಿರಾಜು ಅವರ ನಾಯಕತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಿಜೆಪಿಗೆ ಹೆಚ್ಚು ಮತ ಗಳಿಸಲು ಸಾಧ್ಯವಾಗಲಿದೆ. ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಕೂಡ ಗೆಲ್ಲಿಸುವ ಭರವಸೆ ನೀಡಿದ್ದಾರೆ.

ಅಭಿವೃದ್ಧಿಯ ಭರವಸೆ

ಈಗಾಗಲೇ ವೈದ್ಯಕೀಯ ಮತ್ತು ಆರೋಗ್ಯ ಸಚಿವರಾಗಿ ಕೋವಿಡ್‌ನಂತಹ ಸಾಂಕ್ರಾಮಿಕವನ್ನೂ ನಿಭಾಯಿಸಿದ ಅನುಭವವಿರುವ ಹಾಗೂ ಶಾಸಕರಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಅಭಿವೃದ್ಧಿಯ ಸ್ಪರ್ಶ ನೀಡಿರುವ ಡಾ.ಕೆ.ಸುಧಾಕರ್‌, ಸಂಸದರಾಗಿ ತಮ್ಮ ಕ್ಷೇತ್ರವನ್ನು ವಿಕಸಿತ ಕ್ಷೇತ್ರವನ್ನಾಗಿಸುವ ಪಣ ತೊಟ್ಟಿದ್ದಾರೆ.

ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲವನ್ನು ಬೆಂಗಳೂರಿಗೆ ಉಪನಗರಗಳಾಗಿ ಬೆಳೆಸುವುದು ಅವರ ಗುರಿ. ರಾಜ್ಯ ಕಾಂಗ್ರೆಸ್‌ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳು ಅರೆಬರೆಯಾಗಿ ಜಾರಿಯಾಗಿರುವುದರಿಂದ ಅನುದಾನವೇ ಇಲ್ಲದೆ ಅಭಿವೃದ್ದಿ ಶೂನ್ಯವಾಗಿದೆ. ಆದ್ದರಿಂದ ಈ ಬಾರಿಯೂ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸಿ ಬಯಲುಸೀಮೆ ಭಾಗದಲ್ಲಿ ಬಿಜೆಪಿ-ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತಂದು ಅಭಿವೃದ್ಧಿಗೆ ಮರು ಚಾಲನೆ ನೀಡಬೇಕೆಂದು ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ದೆಹಲಿಗೆ ಪರ್ಯಾಯವಾಗಿ ನೋಯ್ಡಾ ಇರುವಂತೆ ಬೆಂಗಳೂರಿಗೆ ಪರ್ಯಾಯವಾಗಿ ದೇವನಹಳ್ಳಿಯನ್ನು ಬೆಳೆಸುವ ಗುರಿ ಡಾ.ಕೆ.ಸುಧಾಕರ್‌ ಅವರದ್ದು. ಹಾಗೆಯೇ ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲವನ್ನು ಉಪನಗರಗಳಾಗಿ ಅಭಿವೃದ್ಧಿಪಡಿಸಲಾಗುತ್ತದೆ. ನನ್ನನ್ನು ಆಯ್ಕೆ ಮಾಡಿದರೆ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಲು ಸಹಾಯಕವಾಗುತ್ತದೆ. ಕಾಂಗ್ರೆಸ್‌ಗೆ ಮತ ಹಾಕಿದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಎಂದು ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌ ಸರ್ಕಾರ ಯಾವುದೇ ರಸ್ತೆ, ಸೇತುವೆ ನಿರ್ಮಿಸಿಲ್ಲ. ಎಲ್ಲಿಯೂ ಅಭಿವೃದ್ಧಿ ನಡೆಯುತ್ತಿಲ್ಲ. ಇದನ್ನು ಜನರಿಗೆ ತಿಳಿಸಬೇಕಿದೆ. ಜೆಡಿಎಸ್‌ ಜೊತೆ ಸಮನ್ವಯ ತಂಡಗಳನ್ನು ರಚಿಸಿ, ಪ್ರತಿ ಹಂತದಲ್ಲೂ ತಂಡಗಳನ್ನು ರಚಿಸಿ ಕೆಲಸ ಮಾಡಬೇಕು. ಬಿಜೆಪಿ-ಜೆಡಿಎಸ್‌ ಒಳಗೊಂಡ ಬೃಹತ್‌ ಪ್ರಚಾರ ಸಭೆಯನ್ನೂ ನಡೆಸಬೇಕಿದೆ ಎಂದು ಅವರು ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.

ಬಾಕ್ಸ್‌

ಐನೂರು ವರ್ಷಗಳಿಂದ ರಾಮ ಮಂದಿರ ಕೇವಲ ಕನಸಾಗಿತ್ತು. ಆದರೆ ಇದು ಬಿಜೆಪಿಗೆ ಕೇವಲ ರಾಜಕೀಯ ಲಾಭ ನಷ್ಟದ ವಿಚಾರವಲ್ಲ ಎನ್ನುವುದು ಮಂದಿರ ಲೋಕಾರ್ಪಣೆ ಮಾಡಿದ ಬಳಿಕ ಸಾಬೀತಾಗಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜೀವಂತವಿದ್ದಾಗ ಅವರನ್ನು ಲೋಕಸಭೆಗೆ ಪ್ರವೇಶಿಸಲು ಕಾಂಗ್ರೆಸ್‌ ಬಿಡಲಿಲ್ಲ. ಅವರ ಹೆಸರು ಹೇಳಲು ಕೂಡ ಕಾಂಗ್ರೆಸ್‌ಗೆ ಯೋಗ್ಯತೆ ಇಲ್ಲ. ಬಾಬಾ ಸಾಹೇಬರ ಅಂತ್ಯಸಂಸ್ಕಾರ ಮಾಡಲು ಕಾಂಗ್ರೆಸ್‌ ಜಾಗ ಕೂಡ ನೀಡಲಿಲ್ಲ. ದಲಿತರಿಗೆ ಮೀಸಲಾದ ಹಣದಲ್ಲಿ 11 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿಗೆ ಬಳಸಲಾಗಿದೆ. ಇಂತಹ ವಿಚಾರದಲ್ಲಿ ಕಾಂಗ್ರೆಸ್‌ ಮಾಡುತ್ತಿರುವ ಅನ್ಯಾಯದ ರಾಜಕೀಯವನ್ನು ಕೊನೆಗೊಳಿಸಲು ಇದು ಸೂಕ್ತ ಸಮಯ.

-ಡಾ.ಕೆ.ಸುಧಾಕರ್‌, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ

ಬಾಕ್ಸ್‌
ಮಣ್ಣಿನ ಮಗನ ಭರವಸೆ

“ನನ್ನಿಂದ 500 ಮತ ಬರುತ್ತದೆ ಎಂದರೂ ಅಂತಹ ಕಡೆ ಹೋಗಿ ಬಿಜೆಪಿ-ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದ್ದಾರೆ. ಇದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ.

You may also like

Leave a Comment

ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

Edtior's Picks

Latest Articles

&copy 2023 by Suddi Mane. All rights reserved.

This website uses cookies to improve your experience. We'll assume you're ok with this, but you can opt-out if you wish. Accept Read More

Adblock Detected

Please support us by disabling your AdBlocker extension from your browsers for our website.
Designed & developed by Crisant Technologies