ಸಿನಿಮಾ ಸೆಲೆಬ್ರೆಟಿಗಳು ಕೆಲವೊಮ್ಮೆ ಮಾತನಾಡುವಾಗ ಅವರು ನೀಡುವ ಹೇಳಿಕೆಗಳು ದೊಡ್ಡ ವಿವಾದಕ್ಕೆ ಕಾರಣವಾಗುವುದುಂಟು. ಇದೀಗ ಸ್ಯಾಂಡಲ್ವುಡ್ ನಟ, ರಿಯಲ್ ಸ್ಟಾರ್ ಖ್ಯಾತಿಯ ಉಪೇಂದ್ರ ಅವರ ಮೇಲೆ ಎಫ್ ಐ ಆರ್ ದಾಖಲಾಗಿದೆ. ನಟ ಉಪೇಂದ್ರ ಅವರು ಪರಿಶಿಷ್ಟ ವರ್ಗದವರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದ ಹಿನ್ನೆಲೆಯಲ್ಲಿ ಅವರ ಮೇಲೆ ಕೇಸನ್ನು ದಾಖಲಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾಗಿರುವ ಮಧುಸೂದನ್ ಕೆ ಎಸ್ ಎನ್ನುವವರು ದೂರನ್ನು ದಾಖಲು ಮಾಡಿದ್ದಾರೆ.
ಉಪೇಂದ್ರ ಅವರು ಆನ್ಲೈನ್ ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಾ ಪರಿಶಿಷ್ಟ ಪಂಗಡದವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದರು. ಅವರು ನೀಡಿದಂತಹ ಹೇಳಿಕೆಯ ಬೆನ್ನಲ್ಲೇ ನಟನ ವಿರುದ್ಧ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸಿಟ್ಟು ಮತ್ತು ಅಸಮಾಧಾನಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ನಟ ಉಪೇಂದ್ರ ಅವರ ವಿರುದ್ಧ ಸಿ ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ಅನ್ನು ದಾಖಲಿಸಲಾಗಿದೆ.
ಇನ್ನು ಈ ವಿಷಯದ ಕುರಿತಾಗಿ ನಟ ಉಪೇಂದ್ರ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕ್ಷಮಾಪಣೆಯನ್ನು ಕೋರಿದ್ದಾರೆ. ಉಪೇಂದ್ರ ಅವರು ತಮ್ಮ ಪೋಸ್ಟ್ ನಲ್ಲಿ,
ಇಂದು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನೇರ ಪ್ರಸಾರದಲ್ಲಿ ಬಾಯಿ ತಪ್ಪಿ ಒಂದು ಗಾದೆ ಮಾತನ್ನು ಬಳಸಿದ್ದು. . ಅದರಿಂದ ಹಲವರ ಭಾವನೆಗಳಿಗೆ ಧಕ್ಕೆ ಉಂಟಾಗಿರುವುದು ಕಂಡು ಬಂದ ತಕ್ಷಣವೇ ಆ ಲೈವ್ ವಿಡಿಯೋ ವನ್ನು ನನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿರುತ್ತೇನೆ.. ಮತ್ತು ಈ ಮಾತಿಗೆ ಕ್ಷಮೆಯಿರಲಿ
ಎಂದು ತಿಳಿಸಿದ್ದಾರೆ.