ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಜಿ 20 ದೇಶಗಳ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದು, ಈ ವೇಳೆ ಅವರು ಈ ಯುಗದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಹೇಳುತ್ತಾ ಇದು ಕೈಗಾರಿಕಾ ಕ್ರಾಂತಿಯ ಯುಗ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ತಂತ್ರಜ್ಞಾನ ನೇತೃತ್ವದ ಪರಿವರ್ತನೆಯ ಈ ಸಮಯದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಉದ್ಯೋಗಗಳನ್ನು ಸೃಷ್ಟಿಸಿರುವ ಅನುಭವ ಪಡೆದಿರುವ ದೇಶದಲ್ಲಿ ಈ ಸಭೆ ನಡೆಯುತ್ತಿರುವುದು ಅದೃಷ್ಟವೆಂದು ಹೇಳಿದ್ದಾರೆ.
ಸುಧಾರಿತ ತಂತ್ರಜ್ಞಾನ ಬಳಕೆಯಲ್ಲಿ ಕೌಶಲ್ಯವನ್ನು ವೃದ್ಧಿಸುವ ಕಡೆಗೆ ಆದ್ಯತೆಯನ್ನು ನೀಡಬೇಕಾಗಿದೆ. ಭಾರತದಲ್ಲಿ ಸ್ಕಿಲ್ ಇಂಡಿಯಾ ಮಿಷನ್ ಸೂತ್ರದಡಿಯಲ್ಲಿ ಮುಂದಿನ ದಿನಗಳಲ್ಲಿ ವೃತ್ತಿಪರ ನೌಕರರ ಸಮೂಹವನ್ನು ಸೃಷ್ಟಿ ಮಾಡಲು ಸೂಕ್ತವಾದ ಪ್ರೋತ್ಸಾಹವನ್ನು ನೀಡಲಾಗುವುದು ಎನ್ನುವ ಮಾತನ್ನು ಪ್ರಧಾನಿಯವರು ಹೇಳಿದ್ದಾರೆ.
ಇನ್ನು ದೇಶದಲ್ಲಿ ಕೋವಿಡ್ ನ ಸಂಕಷ್ಟದ ಸಮಯದಲ್ಲಿ ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರು ಮಾಡಿದಂತಹ ಕೆಲಸ ಅದ್ಭುತವಾದುದು, ಅದು ಅವರ ಅವರ ಕೌಶಲ್ಯ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ.
ಅಲ್ಲದೇ ಇದು ನಮ್ಮ ಸೇವೆ ಮತ್ತು ಸಹಾನುಭೂತಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎನ್ನುವ ಮಾತುಗಳನ್ನು ಹೇಳಿದ ನರೇಂದ್ರ ಮೋದಿಯವರು, ವಾಸ್ತವವಾಗಿ ವಿಶ್ವಕ್ಕೆ ನುರಿತ ಉದ್ಯೋಗಿಗಳ ಪೂರೈಕೆದಾರರಲ್ಲಿ ಒಂದಾಗುವ ಎಲ್ಲಾ ಸಾಮರ್ಥ್ಯವನ್ನು ಭಾರತವು ಪಡೆದಿದೆ ಎನ್ನುವ ಮಾತನ್ನು ಉಲ್ಲೇಖಿಸಿದ್ದಾರೆ. ಪ್ರತಿಯೊಂದು ದೇಶದ ವಿಶಿಷ್ಟ ಆರ್ಥಿಕ ಸಾಮರ್ಥ್ಯ, ಬಲ ಮತ್ತು ಸವಾಲುಗಳನ್ನು ನಾವು ಪರಿಗಣಿಸಬೇಕಾಗಿದೆ. ಅಲ್ಲದೇ ಸಾಮಾಜಿಕ ಸುಸ್ಥಿರತೆಯ ಹಣಕಾಸಿನ ವಿಚಾರದಲ್ಲಿ ಒಂದೇ ರೀತಿಯ ನೀತಿಯನ್ನು ಅಳವಡಿಸಿಕೊಳ್ಳುವುದು ಸಮಂಜಸವಾದುದಲ್ಲ ಎಂದಿದ್ದಾರೆ.