ಸ್ಯಾಂಡಲ್ ವುಡ್ ನಲ್ಲಿ ನಟ ಕಿಚ್ಚ ಸುದೀಪ್ ಅವರ ಮೇಲೆ ನಿರ್ಮಾಪಕರಿಬ್ಬರು ಒಂದಷ್ಟು ಆರೋಪಗಳನ್ನು ಮಾಡಿರುವ ವಿಚಾರ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಈಗ ಇದರ ಬೆನ್ನಲ್ಲೇ ತಮಿಳಿನ ಸೂಪರ್ ಸ್ಟಾರ್ ಅಜಿತ್ ಕುಮಾರ್ ಅವರ ಮೇಲೆ ನಿರ್ಮಾಪಕರೊಬ್ಬರು ಅಂತಹುದೇ ಆರೋಪವನ್ನು ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ತಮಿಳಿನಲ್ಲಿ ನಟ ಅಜಿತ್ ಕುಮಾರ್ ಅವರು ದೊಡ್ಡ ಹೆಸರನ್ನು ಮಾಡಿರುವ, ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಪಡೆದುಕೊಂಡಿರುವ ನಟನಾಗಿದ್ದಾರೆ. ಅವರ ಅಭಿಮಾನಿಗಳು ನಟನ ಮುಂದಿನ ಸಿನಿಮಾದ ನಿರೀಕ್ಷೆಯಲ್ಲಿ ಇದ್ದಾರೆ.
ಇವೆಲ್ಲವುಗಳ ನಡುವೆ ನಿರ್ಮಾಪಕರೊಬ್ಬರು ಅಜಿತ್ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ. ನಟ ಕಮಲ ಹಾಸನ್ ಅವರ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಮಾಣಿಕ್ಯಂ ನಾರಾಯಣನ್ ಅವರು ನಟ ಅಜಿತ್ ಅವರ ವಿರುದ್ಧ ಹಣಕಾಸಿನ ವಿಚಾರವಾಗಿ ಕೆಲವೊಂದು ಆರೋಪಗಳನ್ನು ಮಾಡಿದ್ದಾರೆ. ಈ ಹಿಂದೆ ನಟ ಅಜಿತ್ ತಮ್ಮ ತಂದೆ ತಾಯಿಯನ್ನು ಮಲೇಷ್ಯಾಗೆ ಕಳುಹಿಸಲು ನನ್ನಿಂದ ಹಣವನ್ನು ಪಡೆದುಕೊಂಡಿದ್ದರು. ನನಗಾಗಿ ಸಿನಿಮಾ ಮಾಡುತ್ತೇನೆ, ಆಗ ತನಗೆ ನೀಡುವ ಸಂಭಾವನೆಯಲ್ಲಿ ಅಡ್ಜೆಸ್ಟ್ ಮಾಡಿಕೊಳ್ಳೋಣ ಎಂದು ಹೇಳಿದ್ದರು.
ಆದರೆ ಇಲ್ಲಿಯವರೆಗೆ ಅವರು ನನಗೆ ಹಣವನ್ನು ಹಿಂದಿರುಗಿಸಿಲ್ಲ ಹಾಗೂ ನನಗಾಗಿ ಸಿನಿಮಾ ಕೂಡಾ ಮಾಡಲಿಲ್ಲ. ಇಷ್ಟು ವರ್ಷಗಳಲ್ಲಿ ಅವರು ಇದರ ಬಗ್ಗೆ ಮಾತನಾಡಲಿಲ್ಲ. ಅವರು ತನ್ನನ್ನು ತಾನು ಸಂಭಾವಿತನೆಂದು ಹೇಳುತ್ತಾರೆ, ಆದರೆ ಅವರು ಸಂಭಾವಿತನಲ್ಲ ಎಂದು ಮಾಣಿಕ್ಯಂ ನಾರಾಯಣನ್ ಮಾಧ್ಯಮಗಳ ಮುಂದೆ ನಟ ಅಜಿತ್ ಅವರ ಬಗ್ಗೆ ಸಿಟ್ಟು ಮತ್ತು ಅಸಮಾಧಾನವನ್ನು ಹೊರ ಹಾಕಿದ್ದಾರೆ. ಇಂದು ಅಜಿತ್ ಅವರು ಒಂದು ಸಿನಿಮಾಕ್ಕೆ ಐವತ್ತು ಕೋಟಿ ಸಂಭಾವನೆ ಪಡೆಯುತ್ತಾರೆ, ಅಂತಹವರು ಮಾಡುವ ಅವಶ್ಯಕತೆ ಏನಿದೆ? ಎಂದು ಪ್ರಶ್ನೆ ಮಾಡಿದ್ದಾರೆ ಮಾಣಿಕ್ಯಂ.
ಎಎಂ ರತ್ನಂ ರಂತಹ ಕೆಲವು ನಿರ್ಮಾಪಕರು ಅಜಿತ್ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಬಹಳಷ್ಟು ನಷ್ಟವನ್ನು ಎದುರಿಸಿದ್ದಾರೆ. ಆದರೆ ಅಜಿತ್ ಮಾತ್ರ ಎಂದಿಗೂ ಅವರ ಪರವಾಗಿ ನಿಂತುಕೊಂಡಿಲ್ಲ ಎಂದು ಮಾಣಿಕ್ಯಂ ಹೇಳಿದ್ದಾರೆ. ಮಾಣಿಕ್ಯಂ ಅವರು ಈ ರೀತಿ ಅಜಿತ್ ಮೇಲೆ ಆರೋಪ ಮಾಡುತ್ತಿರುವುದು ಇದೇ ಮೊದಲೇನಲ್ಲ.. ಈ ಹಿಂದೆಯೂ ಹಲವು ಬಾರಿ ಅವರು ನಟನ ಮೇಲೆ ಆರೋಪಗಳನ್ನು ಮಾಡಿದ್ದಾರೆ. ಆದರೆ ನಟ ಅಜಿತ್ ಮಾತ್ರ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ..