ಸ್ಯಾಂಡಲ್ ವುಡ್ ನ ಸ್ಟಾರ್ ಹೀರೋ ಆಗಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ವಿಭಿನ್ನವಾದ ಸಿನಿಮಾಗಳ ಮೂಲಕ ಪ್ರೇಕ್ಷಕರ ಗಮನವನ್ನು ಸೆಳೆಯುವ ಜೊತೆಗೆ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಂಡಿರುವ ನಟನಾಗಿದ್ದಾರೆ. ಉಪೇಂದ್ರ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಮಾತ್ರವೇ ಅಲ್ಲದೇ ನೆರೆಯ ತೆಲುಗು ಸಿನಿಮಾಗಳಲ್ಲಿಯೂ ಸಾಕಷ್ಟು ಹೆಸರು ಮತ್ತು ಅಭಿಮಾನಿಗಳು ಇದ್ದಾರೆ. ಸಿನಿಮಾ ಸೆಲೆಬ್ರಿಟಿಗಳು ಚಿತ್ರರಂಗ ಮಾತ್ರವೇ ಅಲ್ಲದೇ ಬೇರೆ ಬೇರೆ ಉದ್ದಿಮೆ ಹಾಗೂ ವ್ಯವಹಾರಗಳಲ್ಲಿ ಸಹಾ ಹೂಡಿಕೆಯನ್ನು ಮಾಡುವ ಮೂಲಕ ಹಣವನ್ನು ಗಳಿಸುತ್ತಿದ್ದಾರೆ. ಈಗ ನಟ ಉಪೇಂದ್ರ ಅವರು ತಾವು ಕೂಡಾ ಹೊಸದೊಂದು ಉದ್ಯಮ ಆರಂಭ ಮಾಡಿದ್ದಾರೆ.
ನಟ ಉಪೇಂದ್ರ ಅವರಿಗೆ ಬೆಂಗಳೂರಿನಲ್ಲಿ ಒಂದು ದೊಡ್ಡದಾದ, ಸುಸಜ್ಜಿತವಾದ ಫಾರ್ಮ್ ಹೌಸ್ ಇದ್ದು, ಅದನ್ನು ವಿಶೇಷ ಸಂದರ್ಭಗಳಲ್ಲಿ ಬಳಿಸಿಕೊಳ್ಳುತ್ತಾರೆ. ಉಳಿದ ಸಂದರ್ಭದಲ್ಲಿ ಈ ಫಾರ್ಮ್ ಹೌಸ್ ಖಾಲಿಯಾಗಿರುತ್ತದೆ. ಈಗ ನಟ ಉಪೇಂದ್ರ ಅವರು ಈ ಫಾರ್ಮ್ ಹೌಸ್ ಅನ್ನು ಈ ರೀತಿ ಖಾಲಿ ಬಿಡುವುದರ ಬದಲು ಅದನ್ನು ಬಾಡಿಗೆಗೆ ನೀಡಲು ಆಲೋಚನೆ ಮಾಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಉಪೇಂದ್ರ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫಾರ್ಮ್ ಹೌಸ್ ಕುರಿತಾದ ವೀಡಿಯೋ ಒಂದನ್ನು ಹಂಚಿಕೊಂಡು ಒಂದಷ್ಟು ಮಾಹಿತಿಗಳನ್ನು ನೀಡಿದ್ದಾರೆ.
ತಮ್ಮ ಪಾರ್ಮ್ ಹೌಸ್ ವಿಡಿಯೋವನ್ನು ಶೇರ್ ಮಾಡಿದ ನಟ, ನಮ್ಮ ಫಾರ್ಮ್ ಹೌಸ್ ಈಗ ಎಲ್ಲರಿಗೂ ಲಭ್ಯವಿದೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ದೊಡ್ಡ ಆಲದ ಮರದ ಬಳಿ ಈ ಫಾರ್ಮ್ ಹೌಸ್ ಇದ್ದು, ಸುತ್ತಲು ನಾಲ್ಕು ಎಕರೆಯಷ್ಟು ಹಸಿರು ತುಂಬಿದೆ. ಮದುವೆ, ನಿಶ್ಚಿತಾರ್ಥ, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಗಳಂತಹ ವಿಶೇಷ ಆಚರಣೆಗಳಿಗೆ ನಮ್ಮ ಫಾರ್ಮ್ ಹೌಸ್ ಪರಿಪೂರ್ಣವಾಗಿದ್ದು, ಅಗತ್ಯ ಇರುವವರು ಈ ಸಂಖ್ಯೆಗೆ ಕರೆ ಮಾಡಿ ಎಂದು ಉಪೇಂದ್ರ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಉಪೇಂದ್ರ ಅವರ ತೋಟದ ಮನೆ ಸುಮಾರು ನಾಲ್ಕು ಎಕರೆಗಳಷ್ಟು ಇದ್ದು, ಹತ್ತು ಸಾವಿರ ಚದರ ಅಡಿ ಹಾಲ್ ಮತ್ತು ಆರು ಐಷಾರಾಮಿ ಬೆಡ್ ರೂಮ್ ಗಳನ್ನು, 10,000 ಚದರ ಅಡಿ ಉಚಿತ ಸ್ಥಳ ಹಾಗೂ ಇತ್ಯಾದಿ ಸೌಲಭ್ಯಗಳನ್ನು ಹೊಂದಿದೆ. ಮದುವೆ ಮತ್ತು ಪಾರ್ಟಿಗಳಿಗೆ ಇಂತಹ ಸ್ಥಳಗಳ ಬೇಡಿಕೆ ಇರುವುದರಿಂದ ಸಹಜವಾಗಿಯೇ ಉಪೇಂದ್ರ ಅವರ ಹೊಸ ವ್ಯವಹಾರಕ್ಕೆ ಬೇಡಿಕೆ ಬರಲಿದೆ. ಸೋಶಿಯಲ್ ಮೀಡಿಯಾದಲ್ಲೂ ಅನೇಕರು ಈ ಬಗ್ಗೆ ಕಮೆಂಟ್ ಮಾಡಿದ್ದಾರೆ. ನೆಟ್ಟಿಗರಲ್ಲಿ ಕೆಲವರು ತೋಟದ ಮನೆಯನ್ನು ಬಾಡಿಗೆಗೆ ಏಕೆ ಬಿಡುತ್ತಿದ್ದಾರೆ ? ಎಂದು ಪ್ರಶ್ನೆ ಮಾಡಿದರೆ, ಕೆಲವರು ಖಾಲಿ ಬಿಡುವುದಕ್ಕಿಂತ ಈ ರೀತಿ ಬಾಡಿಗೆಗೆ ಕೊಡುವುದು ಒಳ್ಳೆಯದು ಎಂದಿದ್ದಾರೆ.