ಬಿಜೆಪಿ ಕಾಲದಲ್ಲಿ ನಡೆದಿದ್ದಂತಹ ಬಿಟ್ ಕಾಯಿನ್ ಹಗರಣದ ವಿಚಾರ ಈಗ ಕಾಂಗ್ರಸ್ ಸರ್ಕಾರದ ಅವಧಿಯಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಗರಣದ ವಿರುದ್ಧ ಮರು ತನಿಖೆಯನ್ನು ನಡೆಸುವಂತೆ ರಾಜ್ಯದಲ್ಲಿ ಸರ್ಕಾರ ತನ್ನ ಆದೇಶವನ್ನು ಹೊರಡಿಸಿದೆ. ಈ ವಿಚಾರವಾಗಿ ತನಿಖೆಯನ್ನು ನಡೆಸಲು ಎಸ್‍ಐಟಿ (SIT ) ರಚನೆ ಮಾಡಲಾಗಿದ್ದು, ತನಿಖೆಯ ಕಾರ್ಯವು ನಾಳೆಯಿಂದಲೇ ಅಂದರೆ ಮಂಗಳವಾರದಿಂದಲೇ ಪ್ರಾರಂಭವಾಗುತ್ತಿದೆ.
ಸಿಐಡಿ ಎಡಿಜಿಪಿ ಮನೀಶ್ ಕರ್ಬೀಕರ್ ಅವರ ನೇತೃತ್ವದಲ್ಲಿ ಈಗಾಗಲೇ ಎಸ್‍ಐಟಿಯನ್ನು ರಚನೆ ಮಾಡಲಾಗಿದೆ. ಸಿಐಡಿ ಸೈಬರ್ ಸೆಲ್ ನ ಎಸ್ಪಿ ಆಗಿರುವ ಶರತ್ ಈ ಪ್ರಕರಣದ ತನಿಖಾಧಿಕಾರಿ ಆಗಿ ಕಾರ್ಯವನ್ನು ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಇದೇ ಬಿಟ್ ಕಾಯಿನ್ ಹಗರಣವನ್ನು ಸಿಸಿಬಿ ತನಿಖೆ ಮಾಡಿತ್ತು. ಆ ವೇಳೆ ಕಾಂಗ್ರೆಸ್ ತನಿಖೆಯಲ್ಲಿ ಹಗರಣ ನಡೆದಿದೆ ಎನ್ನುವ ಆರೋಪವನ್ನು ಮಾಡಿತ್ತು. ಆಗ ರಾಜಕಾರಣಿಗಳು ತನಿಖೆಯ ಹಾದಿಯನ್ನು ತಪ್ಪಿಸಿದ್ದಾರೆ ಎಂದು ಆರೋಪ ಮಾಡಲಾಗಿತ್ತು.
ಸೋಮವಾರ ಅಂದರೆ ಇಂದು ಈ ವಿಚಾರವಾಗಿ ಸಿಐಡಿ ಡಿಜಿ ಸಲೀಂ ಅವರು ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದ್ದು, ಎಸ್‍ಐಟಿ ಮುಖ್ಯಸ್ಥ ಮನೀಷ್ ಕರ್ಬೀಕರ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು ತನಿಖೆಯ ರೂಪುರೇಷೆ, ಫೈಲ್ ವರ್ಗಾವಣೆ, ಕೆಳ ಹಂತದಲ್ಲಿ ಯಾವೆಲ್ಲ ಅಧಿಕಾರಿಗಳು ಟೀಂನಲ್ಲಿ ಇರಬೇಕೆನ್ನುವ ಬಹಳ ಮುಖ್ಯವಾರ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಈ ಹಿಂದೆ ನಡೆಸಿದ್ದ ತನಿಖೆಯಲ್ಲಿ ಸಿಸಿಬಿಯಿಂದ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ.
ಆದ ಕಾರಣ ಈಗ ಮತ್ತೆ ತನಿಖೆಗೆ ಚಾಲನೆ ನೀಡಲು ಎಸ್‍ಐಟಿ ತನಿಖೆ ಕೋರ್ಟ್‍ನಿಂದ ಅನುಮತಿಯನ್ನು ಪಡೆಯಬೇಕಾಗಿದ್ದು ಅದಕ್ಕೆ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಈಗ ಸಿಸಿಬಿಯಿಂದ ಫೈಲ್ ಗಳ ವರ್ಗಾವಣೆಯನ್ನು ಕೋರುತ್ತಾ ಪತ್ರವನ್ನು ಬರೆಯಲು ಸೂಚನೆ ನೀಡಲಾಗಿದ್ದು, ಸಿಸಿಬಿಯ ತನಿಖಾ ಫೈಲ್ ಕೈ ಸೇರಿದ ನಂತರ ಎಸ್ಐಟಿ ತನ್ನ ತನಿಖೆಯನ್ನು ಪ್ರಾರಂಭ ಮಾಡುತ್ತದೆ ಎಂದು ತಿಳಿದು ಬಂದಿದೆ.