ದೇಶದ ವಿವಿಧ ನಗರಗಳಲ್ಲಿ ಇರುವ ಅನೇಕ ಸುಪ್ರಸಿದ್ಧ ಕೋಟೆಗಳನ್ನು ನೀವು ನೋಡಿರಬಹುದು. ಆದರೆ ನೀವು ಎಂದಾದರೂ ಸಮುದ್ರದ ಮಧ್ಯದಲ್ಲಿ ಅಥವಾ ಅದರ ತೀರದಲ್ಲಿ ನೆಲೆಗೊಂಡಿರುವ ಕೋಟೆಗಳಿಗೆ ಭೇಟಿಯನ್ನು ನೀಡಿದ್ದೀರಾ? ನಮ್ಮ ದೇಶದಲ್ಲಿ ಇಂತಹ ಹಲವು ಕೋಟೆಗಳಿದ್ದು, ನೀವು ಇಲ್ಲಿಗೆ ಭೇಟಿ ನೀಡಿದಾಗ ಕೋಟೆಯ ಜೊತೆಗೆ ಸಮುದ್ರದ ಅದ್ಭುತ ನೋಟವನ್ನು ಕಾಣಬಹುದಾಗಿದೆ. ಅಲ್ಲದೇ ಈ ಕೋಟೆಗಳ ಅದ್ಭುತ ಸ್ಥಳಗಳು ನಿಮ್ಮ ಪ್ರವಾಸವನ್ನು ಸ್ಮರಣೀಯವಾಗಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ದಿಯು ಕೋಟೆ, ಗುಜರಾತ್: ಗುಜರಾತ್ನಲ್ಲಿರುವ ದಿಯು ಕೋಟೆಗೆ ಭೇಟಿಯು ನಿಮ್ಮ ಪ್ರವಾಸದ ನೆನಪನ್ನು ಸದಾ ಹಸಿರಾಗಿಡುತ್ತದೆ. ಈ ಸುಂದರವಾದ ಕೋಟೆಯು ಅರಬ್ಬೀ ಸಮುದ್ರದ ಮಧ್ಯದಲ್ಲಿದ್ದು, ಇದು ಅನೇಕ ಕಿಟಕಿಗಳನ್ನು ಹೊಂದಿದೆ. ಆದರೆ ಈ ಕೋಟೆಯ ಒಂದು ಕಿಟಕಿಯು ಸಮುದ್ರದ ನೋಟವನ್ನು ಸವಿಯಲು ಹೆಸರುವಾಸಿಯಾಗಿದೆ. ಈ ಕೋಟೆಯನ್ನು ಪೋರ್ಚುಗೀಸ್ ಶೈಲಿಯಲ್ಲಿ ನಿರ್ಮಿಸಲಾಗಿದ್ದು ಬಹಳ ಆಕರ್ಷಕವಾಗಿದೆ.
ಮುರುದ್ ಜಂಜಿರಾ ಕೋಟೆ: ಮಹಾರಾಷ್ಟ್ರದಲ್ಲಿನ ಈ ಕೋಟೆ ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಈ ಕೋಟೆಯನ್ನು ಅಂಡಾಕಾರದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಆಕಾರದಿಂದಾಗಿಯೇ ಕೋಟೆ ಇನ್ನಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಈ ಕೋಟೆಯಿಂದ ಅರಬ್ಬೀ ಸಮುದ್ರದ ನೋಟವು ಬಹಳ ಮನೋಹರವಾಗಿದೆ. ಈ ಕೋಟೆಯಿಂದ ಸಮುದ್ರದ ಸೊಬಗನ್ನು ನೋಡಲು ದೂರ ದೂರದಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
ಬೇಕಲ್ ಕೋಟೆ : ಕೇರಳದಲ್ಲಿರುವ ಬೇಕಲ್ ಕೋಟೆಯು ತನ್ನ ಎತ್ತರಕ್ಕೆ ಹೆಸರುವಾಸಿಯಾಗಿದ್ದು, ಈ ಕೋಟೆಯ ಮೇಲಿನಿಂದ ನೋಡಿದಾಗ ಸುತ್ತಲ ನೋಟವು ಬಹಳ ಸುಂದರವಾಗಿ ಕಾಣುತ್ತದೆ. ಇದು ಮಾತ್ರವೇ ಅಲ್ಲದೇ ಈ ಕೋಟೆಯಿಂದ ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರದ ಭವ್ಯವಾದ ನೋಟ ಮತ್ತು ಸಾಗರದ ಅಲೆಗಳು ಕಣ್ಮನ ಸೆಳೆಯುತ್ತದೆ.
ಅಗುಡಾ ಕೋಟೆ: ಗೋವಾದಲ್ಲಿರುವ ಅಗುಡಾ ಕೋಟೆ, ಅಲ್ಲಿಂದ ಕಾಣುವ ವಿಶಾಲ ಸಮುದ್ರದ ನೋಟ, ರಮಣೀಯ ಎನಿಸುತ್ತದೆ. ಇಲ್ಲಿರುವ ಲೈಟ್ಹೌಸ್ ನಿಂದ ನೀವು ಸಿಂಕ್ವೆರಿಮ್ ಬೀಚ್ ಅನ್ನು ಸಹಾ ನೋಡಬಹುದಾಗಿದೆ. ಅಲ್ಲದೇ ಈ ಕೋಟೆಯಲ್ಲಿ ನೀವು ಪೋರ್ಚುಗೀಸ್ ವಾಸ್ತುಶಿಲ್ಪವನ್ನು ಕಾಣಬಹುದಾಗಿದೆ.
ಸುವರ್ಣದುರ್ಗ ಕೋಟೆ: ಮಹಾರಾಷ್ಟ್ರ ದಲ್ಲಿ ಇರುವ ಸುವರ್ಣದುರ್ಗ ಕೋಟೆಯನ್ನು ಸುವರ್ಣ ಕೋಟೆ ಎಂದೂ ಕರೆಯಲಾಗುತ್ತದೆ. ಸಮುದ್ರದ ಕಡೆಯಿಂದ ಧಾಳಿಯನ್ನು ತಪ್ಪಿಸಲು ಈ ಕೋಟೆಯನ್ನು ನಿರ್ಮಾಣ ಮಾಡಲಾಗಿತ್ತು. ಇದು ಕೊಂಕಣ ಸಾಗರ ತೀರದಲ್ಲಿದ್ದು, ಕಡಲತೀರದ ಉದ್ದಕ್ಕೂ ಹಸಿರಿನ ಸಿರಿಗೆ ಇದು ಸಾಕಷ್ಟು ಹೆಸರುವಾಸಿಯಾಗಿದೆ. ಇಲ್ಲಿರುವ ಹಚ್ಚ ಹಸಿರು ಮನಸ್ಸಿಗೆ ನಿರಾಳತೆಯ ಅನುಭೂತಿ ನೀಡುತ್ತದೆ.