ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿಯವರ ಎಡ ಮೊಣಕಾಲಿನ ಶಸ್ತ್ರ ಚಿಕಿತ್ಸೆಯ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಿದಾಡಿವೆ. ಧೋನಿ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಮೊದಲು ಅವರು ಕೈಯ್ಯಲ್ಲಿ ಭಗವದ್ಗೀತೆಯನ್ನು ಹಿಡಿದಿದ್ದ ಫೋಟೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಈ ಫೋಟೋಗೆ ಎಲ್ಲೆಡೆಯಿಂದಲೂ ಸಾಕಷ್ಟು ಮೆಚ್ಚುಗೆಗಳು ಹರಿದು ಬಂದಿದ್ದವು. ಧೋನಿ ಅವರು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಕ್ರೀಡಾ ಮೂಳೆ ಶಸ್ತ್ರಚಿಕಿತ್ಸಕ ಡಾ.ದಿನ್ಶಾ ಪರಿದಿವಾಲಾ ಅವರಿಂದ ಚಿಕಿತ್ಸೆ ಪಡೆದಿದ್ದಾರೆ.
ಐಪಿಎಲ್ ಫೈನಲ್ ಮುಗಿಸಿ ಅಹಮದಾಬಾದ್ ನಿಂದ ಮುಂಬೈಗೆ ಬಂದಿದ್ದ ಧೋನಿ ಗುರುವಾರ ಬೆಳಗ್ಗೆ ಈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರು ಎನ್ನಲಾಗಿದೆ. ಧೋನಿ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಶಸ್ತ್ರ ಚಿಕಿತ್ಸೆಯ ನಂತರ ಧೋನಿ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೆರಡು ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಹೇಳಲಾಗಿದೆ. ಕೆಲವು ದಿನಗಳ ವಿಶ್ರಾಂತಿಯ ನಂತರ ಅವರು ಇಂಟೆನ್ಸಿವ್ ರಿಹ್ಯಾಬಿಲಿಟೇಷನ್ ಪ್ರಾರಂಭಿಸುತ್ತಾರೆ.
ಮುಂಬರುವ ಐಪಿಎಲ್ ಗೆ ಸಜ್ಜಾಗಲು ಅವರಿಗೆ ಸಾಕಷ್ಟು ಸಮಯವಿದೆ. ಸಿಎಸ್ಕೆ, ಸಿಇಒ ಕಾಶಿ ವಿಶ್ವನಾಥನ್ ಅವರು ಧೋನಿ ಶೀಘ್ರದಲ್ಲೇ ಸಂಪೂರ್ಣ ಫಿಟ್ನೆಸ್ ಸಾಧಿಸಲಿದ್ದಾರೆ ಎಂದು ಹೇಳಿದ್ದಾರೆ. ಮೊಣಕಾಲಿನ ಗಾಯದಿಂದಲೇ ಮಾಹೀ ಐಪಿಎಲ್ನಲ್ಲಿ ಎಲ್ಲಾ ಪಂದ್ಯಗಳನ್ನು ಆಡಿದ್ದರು. ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ರಿಷಬ್ ಪಂತ್ ಮತ್ತು ಇತರ ಹಲವು ಭಾರತೀಯ ಕ್ರಿಕೆಟಿಗರಿಗೆ ದಿನ್ ಶಾ ಪರಿದಿವಾಲಾ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.