ಮಕರ ಸಂಕ್ರಾಂತಿಯ ದಿನದಂದು ಪಂಚಾಂಗದ ನಿರಯನ ಪದ್ಧತಿಗನುಸಾರ ಸೂರ್ಯನ ಉತ್ತರಾಯಣ ಪ್ರಾರಂಭವಾಗುತ್ತದೆ. ‘ಮಕರ ಸಂಕ್ರಾಂತಿ’ ಹಬ್ಬವು ತಿಥಿವಾಚಕವಾಗಿರದೇ ಅಯನ-ವಾಚಕವಾಗಿದೆ. ಈ ದಿನ ಸೂರ್ಯನ ನಿರಯನ ಮಕರ ರಾಶಿಯಲ್ಲಿ ಸಂಕ್ರಮಣವಾಗುತ್ತದೆ. ಇದರೊಂದಿಗೆ ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿಯು ಸಂಕರಾಸುರನೆಂಬ ದೈತ್ಯನನ್ನು ವಧಿಸಿದ್ದಳು ಎಂಬ ಕಥೆಯೂ ಇದೆ. ಸೂರ್ಯನ ಭ್ರಮಣದಿಂದಾಗುವ ಕಾಲ ವ್ಯತ್ಯಾಸವನ್ನು ಸರಿಪಡಿಸಲು ಪ್ರತಿ ೮೦ ವರ್ಷಕ್ಕೊಮ್ಮೆ ಸಂಕ್ರಾಂತಿಯನ್ನು ಒಂದು ದಿನ ಮುಂದೂಡಲಾಗುತ್ತದೆ. ಸಂಕ್ರಾಂತಿಯಂದು ಒಬ್ಬರಿಗೊಬ್ಬರು ಎಳ್ಳು-ಬೆಲ ಹಂಚುತ್ತಾರೆ. ಇದು ಪ್ರೀತಿ ಮತ್ತು ಸೌಹಾರ್ದತೆ ಹೆಚ್ಚಿಸುವ ಹಬ್ಬವಾಗಿದೆ.
ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯ ವರೆಗಿನ ಕಾಲವನ್ನು ‘ದಕ್ಷಿಣಾಯನ’ ಎನ್ನುತ್ತಾರೆ. ದಕ್ಷಿಣಾಯನ ಕಾಲದಲ್ಲಿ ಮೃತನಾದ ವ್ಯಕ್ತಿಯು, ಉತ್ತರಾಯಣದಲ್ಲಿ ಮೃತನಾದ ವ್ಯಕ್ತಿಗಿಂತ ದಕ್ಷಿಣಲೋಕಕ್ಕೆ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ದಿನ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ವಾತಾವರಣವು ಅಧಿಕ ಚೈತನ್ಯಮಯವಾಗಿರುವುದರಿಂದ ಸಾಧನೆಯನ್ನು ಮಾಡುವವರಿಗೆ ಈ ಸಮಯ ಚೈತನ್ಯದ ಲಾಭವಾಗುತ್ತದೆ
ಸಂಕ್ರಾಂತಿಯಲ್ಲಿ ಎಳ್ಳನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ. ಎಳ್ಳು ಸತ್ತ್ವಲಹರಿಗಳನ್ನು ಗ್ರಹಿಸಿ ಪ್ರಕ್ಷೇಪಿಸುತ್ತದೆ. ಎಳ್ಳು ಸೇವಿಸುವುದರಿಂದ ಆಂತರಿಕ ಶುದ್ಧಿಯಾಗುತ್ತದೆ. ಎಳ್ಳು-ಬೆಲ್ಲವನ್ನು ದೇವರಿಗೆ ನೈವೇದ್ಯವೆಂದು ಅರ್ಪಿಸಿ ಇತರರಿಗೆ ಹಂಚುವುದರಿಂದ ಅವರಲ್ಲಿಯೂ ಪ್ರೇಮಭಾವ ಮತ್ತು ಸಕಾರಾತ್ಮಕತೆ ಹೆಚ್ಚುತ್ತದೆ.
ಮಕರಸಂಕ್ರಾಂತಿಯಿಂದ ರಥ ಸಪ್ತಮಿಯವರೆಗಿನ ಕಾಲವು ಪರ್ವಕಾಲವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ. ‘ಹೊಸಪಾತ್ರೆ, ವಸ್ತ್ರ, ಅನ್ನ, ಎಳ್ಳು, ಎಳ್ಳುಪಾತ್ರೆ, ಬೆಲ್ಲ, ಆಕಳು, ಕುದುರೆ, ಚಿನ್ನ ಅಥವಾ ಭೂಮಿಯನ್ನು ಯಥಾಶಕ್ತಿ ದಾನ ಮಾಡಬೇಕು. ಈ ದಿನ ಮುತ್ತೈದೆಯರು ದಾನ ಮಾಡುತ್ತಾರೆ. ಮುತ್ತೈದೆಯರು ಕೆಲವು ಪದಾರ್ಥಗಳನ್ನು ಕುಮಾರಿಯರಿಂದ ಅಪಹರಿಸುತ್ತಾರೆ ಮತ್ತು ಅವರಿಗೆ ಎಳ್ಳುಬೆಲ್ಲ ಕೊಡುತ್ತಾರೆ.’