ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ಮೋಹನ್ ರೆಡ್ಡಿ ನೀಡಿರುವ ಒಂದು ಹೇಳಿಕೆ ಅಥವಾ ಮಾಡಿರುವ ಒಂದು ಘೋಷಣೆ ಈಗ ದೇಶವ್ಯಾಪಿ ದೊಡ್ಡ ಸುದ್ದಿಯಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ರಾಜ್ಯದ ಪ್ರತಿಯೊಬ್ಬ ತಾಯಿಗೆ ಅಮ್ಮ ಒಡಿ (ತಾಯಿ ಮಡಿಲು) ಯೋಜನೆಯ ಅಡಿಯಲ್ಲಿ ತಮ್ಮ ಸರ್ಕಾರ 15,000 ರೂಪಾಯಿಗಳನ್ನು ನೀಡಲಿದೆ ಎಂದು ಘೋಷಣೆಯನ್ನು ಮಾಡಿದ್ದಾರೆ. ತಾಡೆಪಲ್ಲಿ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ರಾಜಣ್ಣ ಬಡಿ ಬಾಟ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂತಹ ಭರವಸೆ ನೀಡಿದ್ದಾರೆ.
ಆರ್ಥಿಕವಾಗಿ ಹಿಂದುಳಿದಿರುವ ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಉದ್ದೇಶ ಹೊಂದಿರಬೇಕೆಂದು ಸಿಎಂ ಹೇಳಿದ್ದಾರೆ. ಎಲ್ಲಾ ಸರ್ಕಾರಿ ಶಾಲೆಗಳಲ್ಲಿಯೂ ಇಂಗ್ಲಿಷ್ ಮೀಡಿಯಂ ಪರಿಚಯಿಸಲಾಗುವುದು ಎಂದಿರುವ ಜಗನ್ಮೋಹನ್ ರೆಡ್ಡಿ ಅವರು, ಅದೇ ವೇಳೆ ತೆಲುಗು ಬೋಧನೆ ಕಡ್ಡಾಯವಾಗಿರುತ್ತದೆ ಎನ್ನುವ ಮಾತನ್ನು ಸಹಾ ಹೇಳಿದ್ದಾರೆ. ಖಾಸಗಿ ಶಾಲೆಗಳಲ್ಲಿ ಪಡೆಯುತ್ತಿರುವ ಅತ್ಯಧಿಕ ಶುಲ್ಕ ಪರಿಷ್ಕರಣೆ ಮಾಡುವುದಾಗಿಯೂ ಸಿಎಂ ಈ ವೇಳೆ ಭರವಸೆ ನೀಡಿದ್ದಾರೆ.
ಎಲ್ಲಾ ಸರ್ಕಾರಿ ಶಾಲೆಗಳನ್ನು ಪುನರುಜ್ಜೀವನಗೊಳಿಸಲು ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿರುವುದರಿಂದ ಸರ್ಕಾರಿ ಶಾಲೆಗಳನ್ನು ಕಳಪೆ ಮಟ್ಟಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿ ತರುವುದಾಗಿ ಹೇಳಿರುವ ಸಿಎಂ, ರಾಜ್ಯದಲ್ಲಿ ಸುಮಾರು 40 ಸಾವಿರ ಸರ್ಕಾರಿ ಶಾಲೆಗಳಿದ್ದು, ಎರಡು ವರ್ಷಗಳಲ್ಲಿ ಅವುಗಳ ಭವಿಷ್ಯ ಬದಲಾಗಲಿದೆ ಎಂದಿದ್ದಾರೆ.