ಕರ್ನಾಟಕ ಕಾಂಗ್ರೆಸ್ ಸರ್ಕಾರವು ಇಂದಿನಿಂದ ತನ್ನ ಮಹತ್ವದ ಅನ್ನಭಾಗ್ಯ ಅಕ್ಕಿ ಖಾತರಿ ಯೋಜನೆಗೆ ಬದಲಾಗಿ ನೇರವಾಗಿ ನಗದು ವರ್ಗಾವಣೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಈ ಹಿಂದೆ ರಾಜ್ಯ ಸರ್ಕಾರಗಳಿಗೆ ಅಕ್ಕಿ ಮತ್ತು ಗೋಧಿಯನ್ನು ನೀಡುತ್ತಿದ್ದ ಕೇಂದ್ರ ಸರ್ಕಾರವು ಜೂನ್ ತಿಂಗಳಿಂದ ಅಕ್ಕಿ ಮತ್ತು ಗೋಧಿ ಸಾಗಾಟವನ್ನು ಸ್ಥಗಿತಗೊಳಿಸಿದೆ. ಇದರಿಂದ ರಾಜ್ಯಕ್ಕೆ ಬರಬೇಕಾದ ಅಕ್ಕಿ ಸಾಗಾಟ ನಿಂತಿರುವುದರಿಂದ, ಉಚಿತ ಅಕ್ಕಿಯ ಬದಲಾಗಿ ನಗದು ಹಣ ನೀಡುವ ನಿರ್ಧಾರವನ್ನು ಸರ್ಕಾರ ಮಾಡಿದೆ.
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ತಮ್ಮ ಪ್ರಣಾಳಿಕೆಯಲ್ಲಿ ಉಚಿತ ಯೋಜನೆಗಳ ಘೋಷಣೆಯನ್ನು ಮಾಡಿತ್ತು. ಇದರಲ್ಲಿ ಉಚಿತವಾಗಿ 10 ಕೆಜಿ ಅಕ್ಕಿಯನ್ನು ವಿತರಿಸುವ ಆಶ್ವಾಸನೆಯಾಗಿತ್ತು. ಚುನಾವಣೆ ನಂತರ ದೊಡ್ಡ ಗೆಲುವನ್ನು ಸಾಧಿಸಿದ ಕಾಂಗ್ರೆಸ್ ಸರ್ಕಾರವು ನೀಡಿದ ಭರವಸೆಯಂತೆ ಉಚಿತ ಅಕ್ಕಿಯನ್ನು ನೀಡುವ ಘೋಷಣೆ ಮಾಡಿತ್ತು. ಆದರೆ 5 ಕೆಜಿ ಕೇಂದ್ರದಿಂದ ಬರುತ್ತಿದ್ದ ಮತ್ತು 5 ಕೆಜಿ ರಾಜ್ಯ ಸರ್ಕಾರ ನೀಡುವ ಅಕ್ಕಿಯನ್ನು ಸೇರಿ 10 ಕೆಜಿ ಘೋಷಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು.
ಆದರೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬರುತ್ತಿದ್ದ 5 ಕೆಜಿ ಅಕ್ಕಿ ಸಾಗಾಟವನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ, ಪ್ರಸ್ತುತ 5 ಕೆಜಿ ಅಕ್ಕಿಯ ಜೊತೆಗೆ ಉಳಿದ 5 ಕೆಜಿ ಅಕ್ಕಿಗೆ ಸಮಾನವಾದ ಹಣವನ್ನು ನೀಡಲು ಕಾಂಗ್ರೆಸ್ ಸರ್ಕಾರ ನಿರ್ಧಾರ ಮಾಡಿದೆ. ಕರ್ನಾಟಕ ರಾಜ್ಯದಲ್ಲಿ 1.28 ಕೋಟಿ ಪಡಿತರ ಚೀಟಿದಾರರಿದ್ದು, ಅವರು ನಗದು ವರ್ಗಾವಣೆಗೆ ಅರ್ಹರಾಗಿದ್ದಾರೆ. ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳನ್ನು ವರ್ಗಾವಣೆ ಮಾಡಲಾಗುತ್ತದೆ ಅಂದರೆ ಅಕ್ಕಿಯ ಬದಲಾಗಿ ಒಬ್ಬರಿಗೆ ಮಾಸಿಕ 170 ರೂಪಾಯಿಗಳು ಸಿಗಲಿದೆ.