ವಾಸ್ತು ಸರಿಯಿಲ್ಲ ಎನ್ನುವ ಕಾರಣವನ್ನು ನೀಡುವ ಮೂಲಕ ಕಳೆದ ಕೆಲವು ವರ್ಷಗಳಿಂದಲೂ ಮುಚ್ಚಲ್ಪಟ್ಟಿದ್ದ ತಮ್ಮ ಕಚೇರಿಯ ಬಾಗಿಲನ್ನು ಈಗ ಮಾನ್ಯ ಮುಖ್ಯಮಂತ್ರಿಯವರಾದ ಸಿಎಂ ಸಿದ್ಧರಾಮಯ್ಯ ಅವರು ಮತ್ತೆ ಓಪನ್ ಮಾಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೌದು, ಸಿಎಂ ಕಛೇರಿಯ ಬಾಗಿಲು ದಕ್ಷಿಣಕ್ಕೆ ಇದೆ ಎನ್ನುವ ಕಾರಣಕ್ಕೆ ಯಾವ ಮುಖ್ಯಮಂತ್ರಿಗಳು ಸಹಾ ಬಳಸದೇ ಇದ್ದ ಸಿಎಂ ಕಛೇರಿಯ ದಕ್ಷಿಣಾಭಿಮುಖವಾಗಿರುವ ಬಾಗಿಲನ್ನು ಇಂದು ಸಿಎಂ ಸಿದ್ಧರಾಮಯ್ಯನವರು ತಮ್ಮ ಸುಮ್ಮುಖದಲ್ಲೇ ತೆರೆಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇಂದು ಅನ್ನಭಾಗ್ಯ ಯೋಜನೆ ವಿಚಾರವಾಗಿ ಹಿರಿಯ ಅಧಿಕಾರಿಗಳ ಜೊತೆಗೆ ಸಭೆಯನ್ನು ನಡೆಸಲು ಬಂದ ವೇಳೆಯಲ್ಲಿ, ತಮ್ಮ ಕಛೇರಿಯ ದಕ್ಷಿಣ ದ್ವಾರವು ಮುಚ್ಚಿರುವುದನ್ನು ಗಮನಿಸಿದ್ದಾರೆ. ವಾಸ್ತು ಕಾರಣದಿಂದಾಗಿ ಬಾಗಿಲನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ ನಂತರ ಮುಖ್ಯಮಂತ್ರಿ ಅವರು ಅಲ್ಲಿಯೇ ನಿಂತಿದ್ದಾರೆ. ಆಗ ಪಶ್ಚಿಮ ದ್ವಾರದಿಂದ ಕಛೇರಿಯ ಒಳಗೆ ಹೋದ ಸಿಬ್ಬಂದಿ ದಕ್ಷಿಣ ದ್ವಾರವನ್ನು ತೆರೆದ ನಂತರವಷ್ಟೇ ಸಿದ್ಧರಾಮಯ್ಯನವರು ತಮ್ಮ ಕಛೇರಿಯೊಳಗೆ ಪ್ರವೇಶ ಮಾಡಿದ್ದಾರೆ.
ಸಿದ್ಧರಾಮಯ್ಯನವರ ಈ ನಿರ್ಣಯದಿಂದಾಗಿ ಈಗ ಕಳೆದ 5 ವರ್ಷಗಳಿಂದ ಬಂದ್ ಆಗಿದ್ದ ದಕ್ಷಿಣದ ಬಾಗಿಲು ಮತ್ತೆ ತೆರೆಯಲ್ಪಟ್ಟಿದೆ. ಈ ಹಿಂದೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ಐದು ವರ್ಷಗಳ ಕಾಲವೂ ದಕ್ಷಿಣ ದ್ವಾರವನ್ನು ಓಪನ್ ಮಾಡಿಸಿದ್ದರು. ಸಿದ್ಧರಾಮಯ್ಯನವರ ಅಧಿಕಾರಾವಧಿ ಮುಗಿದ ನಂತರ ಮತ್ತೆ ಬಾಗಿಲು ಮುಚ್ಚಲಾಗಿತ್ತು. ಈಗ ಮತ್ತೊಮ್ಮೆ ಐದು ವರ್ಷಗಳ ನಂತರ ದಕ್ಷಿಣದ ಬಾಗಿಲು ತೆರೆಯುವ ಯೋಗ ಬಂದಿದೆ.