ಕನ್ನಡ ಕಿರುತೆರೆಯಲ್ಲಿ ಮನರಂಜನೆಯ ಬಹುದೊಡ್ಡ ಮೂಲಗಳಾಗಿವೆ ಸೀರಿಯಲ್ ಗಳು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸೀರಿಯಲ್ ಗಳ ನಿರ್ಮಾಣದಲ್ಲೂ ಹೊಸ ಪ್ರಯೋಗಗಳು ನಡೆದಿವೆ. ಅದ್ದೂರಿತನ ಎನ್ನುವುದು ಸಾಮಾನ್ಯವಾಗಿದೆ. ಇನ್ನು ವಾರಾಂತ್ಯ ಬಂದಾಗ ಪ್ರೇಕ್ಷಕರು ಯಾವ ಸೀರಿಯಲ್ ಗೆ ಈ ವಾರ ಮೊದಲ ಸ್ಥಾನ ನೀಡಿದ್ದಾರೆ ಎನ್ನುವುದು ಟಿ ಆರ್ ಪಿ ಇಂದ ಹೊರ ಬೀಳುತ್ತೆ. ಹಾಗಾದರೆ ಈ ವಾರ ಯಾವ ಸೀರಿಯಲ್ ಗೆ ಯಾವ ಸ್ಥಾನ ಅನ್ನೋದರ ವರದಿ ಇಲ್ಲಿದೆ.
ಕಳೆದ ವಾರದಂತೆ ಈ ವಾರ ಕೂಡಾ ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೊದಲ ಸ್ಥಾನವನ್ನು ಬಿಟ್ಟು ಕೊಡದೇ ಅದೇ ಸ್ಥಾನದಲ್ಲಿ ಮುಂದುವರೆದಿದೆ. ಸ್ನೇಹ ಮತ್ತು ಕಂಠಿ ಮದುವೆ ನಂತರದ ಬೆಳವಣಿಗೆಗಳು, ಮತ್ತೆ ಅತ್ತೆ ಮನೆಗೆ ಹೋದ ಪುಟ್ಟಕ್ಕನ ಹಿರಿ ಮಗಳು ಸಹನ ಹೀಗೆ ಕಥೆಯಲ್ಲಿನ ಹೊಸ ತಿರುವುಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ಸನ್ನು ಪಡೆದುಕೊಂಡಿವೆ.
ಎರಡನೇ ಸ್ಥಾನದಲ್ಲೂ ಸಹಾ ಯಾವುದೇ ಹೊಸ ಬದಲಾವಣೆ ಆಗಿಲ್ಲ. ಈ ವಾರ ಕೂಡಾ ಗಟ್ಟಿಮೇಳ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ. ವೇದಾಂತ್ ಮತ್ತು ಅಮೂಲ್ಯ ಸೂರ್ಯನಾರಾಯಣ ಅವರನ್ನು ಹುಡುಕುವ ಕೆಲಸದಲ್ಲಿ ತೊಡಗಿರುವಾಗಲೇ ಎದುರಾಗಿರುವ ಹೊಸ ಸವಾಲುಗಳು ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುತ್ತಿದೆ.
ಮೂರನೇ ಸ್ಥಾನದಲ್ಲಿ ಮಹತ್ವದ ಬದಲಾವಣೆ ಆಗಿದೆ. ಕೆಲವೇ ದಿನಗಳ ಹಿಂದೆ ಆರಂಭವಾಗಿ ಬಹುಬೇಗ ಜನಮೆಚ್ಚುಗೆ ಪಡೆದು ಮೂರನೇ ಸ್ಥಾನಕ್ಕೆ ಬಂದಿದ್ದ ಅಮೃತಧಾರೆ ಸೀರಿಯಲ್ ಈ ವಾರ ತನ್ನ ಸ್ಥಾನವನ್ನು ಕಳೆದ ವಾರವಷ್ಟೇ ಆರಂಭವಾದ ಸೀತಾರಾಮ ಸೀರಿಯಲ್ ಗೆ ಬಿಟ್ಟು ಕೊಟ್ಟಿದೆ. ಸೀತಾ ರಾಮ ಎರಡನೇ ವಾರಾಂತ್ಯಕ್ಕೆ ಮೂರನೇ ಸ್ಥಾನ ಪಡೆದು ಬೀಗುತ್ತಿದೆ.
ಸೀತಾರಾಮ ಮೂರನೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಅಮೃತಧಾರೆ ಸೀರಿಯಲ್ ಈ ವಾರ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಗೌತಮ್ ಭೂಮಿಕ ವಿವಾಹದ ಹಿನ್ನೆಲೆಯಲ್ಲಿ ಕಥೆಯಲ್ಲಿನ ಬೆಳವಣಿಗಗಳು ಪ್ರೇಕ್ಷಕರನ್ನು ರಂಜಿಸುತ್ತಿದ್ದು, ಮರಳಿ ಟಾಪ್ ರೇಸ್ ನಲ್ಲಿ ಈ ಸೀರಿಯಲ್ ಮೇಲೆ ಏರುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.
ಇನ್ನು ಐದನೇ ಸ್ಥಾನದಲ್ಲಿ ತುಳಸಿ ಮತ್ತು ಮಾಧವನ ಕಥೆಯ ಶ್ರೀರಸ್ತು ಮತ್ತು ಶುಭಮಸ್ತು ಸೀರಿಯಲ್ ಇದ್ದು, ಕಳೆದ ವಾರ ನಾಲ್ಕನೇ ಸ್ಥಾನದಲ್ಲಿದ್ದ ಈ ಸೀರಿಯಲ್ ಈ ವಾರ ಐದನೇ ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ. ಸೀತಾರಾಮ ಮೂರನೇ ಸ್ಥಾನಕ್ಕೇರಿದ ಪರಿಣಾಮ ಅಮೃತಧಾರೆ ಮತ್ತು ಶ್ರೀರಸ್ತು ಶುಭಮಸ್ತು ಸೀರಿಯಲ್ ಗಳು ಒಂದೊಂದು ಸ್ಥಾನ ಕೆಳಗೆ ಬಂದಿದೆ.