ಬಾಲಿವುಡ್ ನಟಿ ಸಾರಾ ಆಲಿ ಖಾನ್ ತನ್ನ ಸರಳ ವ್ಯಕ್ತಿತ್ವದಿಂದ ಜನರ ಮನಸ್ಸನ್ನು ಗೆದ್ದಿರುವ ಯುವ ನಟಿಯಾಗಿದ್ದಾರೆ. ಪಟೌಡಿ ಕುಟುಂಬದ ಕುಡಿ, ಸೈಫ್ ಅಲಿ ಖಾನ್ ಮತ್ತು ಅವರ ಮೊದಲ ಪತ್ನಿ ಅಮೃತಾ ಸಿಂಗ್ ಅವರ ಮಗಳಾದ ಸಾರಾ ಸ್ಟಾರ್ ಕಿಡ್ ಆದರೂ ಜನರಿಗೆ ಬಹಳ ಇಷ್ಟವಾದ ನಟಿಯಾಗಿದ್ದಾರೆ. ರಾಜಮನೆತನದ ಕುಡಿಯಾದರೂ ಸರಳ ಜೀವನ, ಮದ್ಯಮ ವರ್ಗದ ಹೆಣ್ಣು ಮಕ್ಕಳಂತೆ ಇರಲು ಬಯಸುವ ಸಾರಾ ಸರಳತೆ ಅನೇಕರ ಮೆಚ್ಚುಗೆಗೆ ಕಾರಣವಾಗಿದೆ.
ಸಾರಾ ಇಸ್ಲಾಂ ಧರ್ಮಕ್ಕೆ ಸೇರಿದವರಾದರೂ ಬಿಡುವು ಸಿಕ್ಕಾಗಲೆಲ್ಲಾ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿ ಇಲ್ಲಿ ಪೂಜೆ, ಆರಾಧನೆಗಳಲ್ಲಿ ತನ್ಮಯರಾಗುತ್ತಾರೆ. ಈ ವಿಚಾರವಾಗಿ ಅನೇಕ ಇಸ್ಲಾಂ ಸಂಪ್ರದಾಯವಾದಿಗಳು ನಟಿಯನ್ನು ಟೀಕೆ ಮಾಡಿದ್ದು ಉಂಟು. ಆದರೆ ಸಾರಾ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ಇಷ್ಟದ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ.
ಕೆಲವು ದಿನಗಳ ಹಿಂದೆ ನಟಿ ಎರಡನೇ ಬಾರಿಗೆ ಕೇದಾರನಾಥಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದ್ದರು. ಇತ್ತೀಚಿಗೆ ಮಹಾಕಾಲೇಶ್ವರ ಮಂದಿರದಲ್ಲಿ ನಟಿ ಪೂಜೆಯಲ್ಲಿ ಮಗ್ನರಾಗಿದ್ದರು. ಇವೆಲ್ಲವುಗಳ ಬೆನ್ನಲ್ಲೇ ಈಗ ಸಾರಾ ಅಮರನಾಥ ಯಾತ್ರೆಯನ್ನು ಸಹಾ ಮುಗಿಸಿದ್ದು, ಆ ಸಂತೋಷದ ಕ್ಷಣಗಳ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಫೋಟೋ ಮತ್ತು ವೀಡಿಯೋಗಳು ವೈರಲ್ ಆಗಿದೆ.
ಹಣೆಯಲ್ಲಿ ವಿಭೂತಿ ಧರಿಸಿ, ಕೈಯಲ್ಲಿ ತ್ರಿಶೂಲ ಹಿಡಿದು, ಹರ ಹರ ಮಹಾದೇವ ಎಂದು ನಾಮ ಸ್ಮರಣೆ ಮಾಡುತ್ತಾ ಕಾಲ್ನಡಿಗೆಯಲ್ಲಿ ಅಮರನಾಥ ಯಾತ್ರೆ ಮಾಡಿದ ಸಾರಾ ಅವರ ಫೋಟೋಗಳು ವೈರಲ್ ಆದ ಮೇಲೆ ಅನೇಕರು ಅವರ ಪೋಟೋಗಳಿಗೆ ಮೆಚ್ಚುಗೆ ನೀಡಿ ಕಾಮೆಂಟ್ ಗಳನ್ನು ಸಹಾ ಮಾಡಿದ್ದಾರೆ. ದಿನ ಕಳೆದಂತೆ ಸಾರಾ ಹಿಂದೂ ಧಾರ್ಮಿಕ ಆಚರಣೆಗಳಿಗೆ ಬಹಳ ಆಸ್ಥೆ ತೋರಿಸುತ್ತಿರುವುದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.