ಸಚಿವ ಚೆಲುವರಾಯಸ್ವಾಮಿ (Chaluvaraya Swamy) ವಿರುದ್ದ ರಾಜ್ಯಪಾಲರಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು (Siddaramaiah) ಸಮರ್ಥನೆ ಮಾಡಿಕೊಂಡಿದ್ದರವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾ ಮೂಲಕ ತೀವ್ರವಾದ ವಾಗ್ದಾಳಿಯನ್ನು ನಡೆಸಿದ್ದಾರೆ. ಕುಮಾರ ಸ್ವಾಮಿ ಅವರು ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ಕುಮಾರಸ್ವಾಮಿ ಅವರು, ಮಂತ್ರಿಗಳ ಮಾನಗೇಡಿ ಕೃತ್ಯಗಳನ್ನೂ ಸಮರ್ಥನೆ ಮಾಡಿಕೊಳ್ಳುವ ಲಜ್ಜೆಗೇಡಿ ಮುಖ್ಯಮಂತ್ರಿ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ. ಸಚಿವರ ಸುಲಿಗೆಯನ್ನೇ ಸಿಗ್ಗಿಲ್ಲದೆ ಸಮರ್ಥನೆ ಮಾಡಿಕೊಳ್ಳುವ ‘ಸಿದ್ದಕಲೆ’ ಅಸಹ್ಯ ಮತ್ತು ವಾಕರಿಕೆ ತರಿಸುತ್ತಿದೆ. ನಕಲಿ ಪತ್ರ ಎಂದಾದರೆ ರಾಜ್ಯಪಾಲರ ಕಾರ್ಯಾಲಯ ನಕಲಿ (!?) ಪತ್ರದ ಮೇರೆಗೆ ಕ್ರಮ ಜರುಗಿಸಿ ಎಂದು ಷರಾ ಬರೆದಿದೆಯೇ? ಸುಳ್ಳಿನ ಪತ್ರಕ್ಕೆ ಮಾನ್ಯ ರಾಜ್ಯಪಾಲರು ಸ್ಪಂದಿಸಿದ್ದಾರೆಯೇ?
ರಾಜಧರ್ಮದ ಪ್ರವಚನಕಾರರೇ ರಾಜಭವನದ ಪಾವಿತ್ರ್ಯವನ್ನೇ ಶಂಕಿಸುವುದು ತರವೇ? ಸ್ವಯಂ ಘೋಷಿತ ನಕಲಿ ಸಂವಿಧಾನ ತಜ್ಞನಿಗೆ ಇದು ಭೂಷಣವಲ್ಲ. ಕಂಡೋರ ಭುಜದ ಮೇಲೆ ಬಂದೂಕಿಟ್ಟು ಇನ್ನೊಬ್ಬರ ರಾಜಕೀಯ ಜೀವನ ಎತ್ತಿಬಿಡುವ ನಿಮ್ಮಂಥ ‘ಎತ್ತುವಳಿ ಗಿರಾಕಿ’ಗೆ ನಕಲಿಪತ್ರಗಳ ಸೃಷ್ಟಿ ಬೆಣ್ಣೆ ಕಡಿದಷ್ಟೇ ಸಲೀಸು. ಮತ್ತೊಬ್ಬರ ಶ್ರಮದ ಬೆವರೇ ನಿಮ್ಮ ಸ್ವಾರ್ಥ ರಾಜಕಾರಣಕ್ಕೆ ಹವಿಸ್ಸು.
ನಿಮ್ಮ ಸಚಿವರ ವಿರುದ್ಧ ನಿಮ್ಮ @INCKarnataka ಶಾಸಕರೇ ಬರೆದ ಪತ್ರವನ್ನೇ ನಕಲಿ ಎಂದು ಬಿಂಬಿಸಿದ ‘ನಕಲಿರಾಮ’ನ ಉಪ್ಪುಹುಳಿ ಖಾರದ ಬಗ್ಗೆ ನನಗೆ ಗೊತ್ತಿಲ್ಲದ್ದೇನಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಉಗಿದು ಉಪ್ಪಾಕಿದ ಮೇಲೆ ಆ ನಕಲಿ ಪತ್ರ ‘ಅಸಲಿ’ಯಾದ ಕಥೆಯ ಹಕೀಕತ್ತು ಏನಿರಬಹುದು ಸಿಎಂ ಸಾಹೇಬರೇ?
ನಿಮ್ಮ ರಾಜಕೀಯ ಬದುಕಿಗೆ ಬ್ಲ್ಯಾಕ್’ಮೇಲೇ ಬಂಡವಾಳ. ಗೃಹ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ‘ಅಪ್ಪಯ್ಯ ಮತ್ತು ಅತೀಂದ್ರನ ಆಟಾಟೋಪ’ ಕಂಡು ಹೌಹಾರಿದವರು ಯಾರು? ವರ್ಗಾವಣೆ ಪಟ್ಟಿಗೆ ಅಲ್ಲಿ ಬಿದ್ದ ಟಿಕ್ಕುಗಳ ಲೆಕ್ಕ ಹೇಳಬೇಕಾ ಟಿಕ್ ಟಿಕ್ ಸಿದ್ದರಾಮಯ್ಯ?? ಎಂದು ಪ್ರಶ್ನೆಗಳನ್ನು ಮಾಡಿದ್ದಾರೆ.