ನಾನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದನಾದ ಬಳಿಕ ಬಯಲುಸೀಮೆಗೆ ಶಾಶ್ವತ ನೀರಾವರಿ ಯೋಜನೆ ನೀಡುತ್ತೇನೆ. ಹಾಗೆಯೇ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ತರುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮಹತ್ವದ ಭರವಸೆ ನೀಡಿದ್ದಾರೆ.
ಗೌರಿಬಿದನೂರು, ಬಾಗೇಪಲ್ಲಿಯಲ್ಲಿ ಬಿಜೆಪಿ ಶಕ್ತಿಕೇಂದ್ರ ಪ್ರಮುಖರು, ಸಹ-ಪ್ರಮುಖರು ಹಾಗೂ ಕಾರ್ಯಕರ್ತರ ಸಭೆಗಳಲ್ಲಿ, ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಅವರೊಂದಿಗೆ ಭಾಗವಹಿಸಿ ಅವರು ಮಾತನಾಡಿದರು.
ನಾನು ಕೊಟ್ಟ ಮಾತು, ಇಟ್ಟ ಹೆಜ್ಜೆ ಎಂದಿಗೂ ಸುಳ್ಳಾಗುವುದಿಲ್ಲ. ನನ್ನ ಕರ್ಮಭೂಮಿ ಇದೇ ಆಗಿರುವುದರಿಂದ ಇಲ್ಲಿನ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಸಂಸದನಾದ ಬಳಿಕ ಬಯಲುಸೀಮೆ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ತರುತ್ತೇನೆ. ಇಲ್ಲಿ ಹಿಂದೆ ಸಂಸದರಾಗಿದ್ದ ವೀರಪ್ಪ ಮೊಯ್ಲಿ ನೀರು ತರುತ್ತೇನೆ ಎಂದು ಹದಿನೈದು ವರ್ಷ ಹೇಳಿದ್ದರು. ಹಿಂದಿನ ಬಿಜೆಪಿ ಸರ್ಕಾರ ಎತ್ತಿನಹೊಳೆ ಯೋಜನೆಗೆ 4 ಸಾವಿರ ಕೋಟಿ ರೂ. ನೀಡಿತ್ತು ಎಂದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಡವರಿಗೆ ಕೊಡುವ ಸರ್ಕಾರವಾಗಿದ್ದರೆ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ಳುವ ಸರ್ಕಾರವಾಗಿದೆ. ಕಿಸಾನ್ ಸಮ್ಮಾನ್ನಡಿ ಬಿಜೆಪಿ ಸರ್ಕಾರ ರೈತರಿಗೆ 4,000 ರೂ. ನೀಡುತ್ತಿದ್ದರೆ, ಅದನ್ನು ಕಾಂಗ್ರೆಸ್ ಕಿತ್ತುಕೊಂಡಿದೆ. ಬಿಜೆಪಿ ನೀಡುತ್ತಿದ್ದ ವಿದ್ಯಾರ್ಥಿವೇತನವನ್ನು ಕೂಡ ರಾಜ್ಯ ಕಾಂಗ್ರೆಸ್ ಕಿತ್ತುಕೊಂಡಿದೆ ಎಂದು ದೂರಿದರು.
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ 5 ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿದ್ದು, ಅದಕ್ಕಾಗಿಯೇ ಪ್ರತ್ಯೇಕ ಒಕ್ಕೂಟ ತರಲಾಯಿತು. ಆದರೆ ಅದನ್ನು ರದ್ದು ಮಾಡಿದ ಕಾಂಗ್ರೆಸ್ ಸರ್ಕಾರ ಮತ್ತೆ ಕೋಲಾರಕ್ಕೆ ಒಕ್ಕೂಟವನ್ನು ನೀಡಿ ರೈತರ ಸ್ವಾಭಿಮಾನವನ್ನೇ ಕಿತ್ತುಕೊಂಡಿದೆ.ನಾನು ವೈದ್ಯಕೀಯ ಕಾಲೇಜಿಗಾಗಿ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದೆ. ಇದೇ ರೀತಿ ಹಾಲು ಒಕ್ಕೂಟವನ್ನು ಕೂಡ ಮರಳಿ ತರುತ್ತೇನೆ. ಇದನ್ನು ಕಿತ್ತುಕೊಳ್ಳಲು ಈಗಿನ ಚಿಕ್ಕಬಳ್ಳಾಪುರದ ಶಾಸಕರಿಂದಲೂ ಸಾಧ್ಯವಿಲ್ಲ. ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಅದೇ ರೀತಿ ಹಾಲು ಒಕ್ಕೂಟವನ್ನು ಮರಳಿ ತರುವುದು ಕೂಡ ಸತ್ಯ ಎಂದರು.
ಹಿಂದಿನ ಸರ್ಕಾರದಿಂದ ರೈತರಿಗೆ 5 ರೂ. ಹಾಲು ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಎಂಟು ತಿಂಗಳಿಂದ ಈ ಪ್ರೋತ್ಸಾಹ ಧನ ಅಲ್ಲದೆ ಅದರಲ್ಲಿ ಒಂದು ರೂಪಾಯಿ ಇಳಿಸಿದ್ದಾರೆ. ಬೇಸಿಗೆಯಲ್ಲಿ ಹಾಲು ಉತ್ಪಾದಿಸುವುದು ಕಷ್ಟದ ಕೆಲಸ. ನಾನು ಶಾಸಕನಾಗಿದ್ದಾಗ ಕೆರೆಗಳಿಗೆ ನೀರು ತುಂಬಿಸಿದ್ದೆ, ತಾಲೂಕು ಆಸ್ಪತ್ರೆ ನೀಡಿದ್ದೆ. ಆಯುಷ್ಮಾನ್ ಭಾರತ್ ಮೂಲಕ ಜನರಿಗೆ ತಲಾ 5 ಲಕ್ಷ ರೂ. ಆರೋಗ್ಯ ವಿಮೆಯನ್ನು ಪ್ರಧಾನಿ ಮೋದಿ ನೀಡಿದ್ದಾರೆ. ಕೋವಿಡ್ ಸಮಯದಲ್ಲಿ 10 ಕೆಜಿ, ಬಳಿಕ 5 ಕೆಜಿ ಅಕ್ಕಿ ನೀಡಲಾಯಿತು. ಆದರೆ ಕಾಂಗ್ರೆಸ್ ಸರ್ಕಾರ ಅಕ್ಕಿ ನೀಡದೆ ವಂಚಿಸಿದೆ. ಬಳಿಕ 3 ಕೆಜಿ ಅಕ್ಕಿ ನೀಡಿ ಮೂರು ನಾಮ ಹಾಕಿದೆ. ದಲಿತರಿಗೆ ಮೀಸಲಿಟ್ಟ 11 ಸಾವಿರ ಕೋಟಿ ಮೊತ್ತವನ್ನು ಗ್ಯಾರಂಟಿಗೆ ಬಳಸಲಾಗಿದೆ. ಹಿಂದುಳಿದ ವರ್ಗದ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡುತ್ತಾರೆ. ಆದರೆ ಪ್ರಧಾನಿ ಮೋದಿ ಅವರಂತಹ ಹಿಂದುಳಿದ ನಾಯಕ ಬೇರೊಬ್ಬರಿಲ್ಲ. ಆದರೂ ಅವರು ಎಲ್ಲಿಯೂ ಹಾಗೆ ಹೇಳಿಕೊಳ್ಳುವುದಿಲ್ಲ ಎಂದರು.
ಪ್ರಧಾನಿ ಮೋದಿ ಉಜ್ವಲ ಯೋಜನೆ ಮೂಲಕ 10 ಕೋಟಿ ಮಹಿಳೆಯರ ಆರೋಗ್ಯ ರಕ್ಷಣೆ ಮಾಡಿ ಅನಿಲ ಸಿಲಿಂಡರ್ ನೀಡಿದ್ದಾರೆ. ಅವರ ಗೌರವ ಉಳಿಸಲು ಶೌಚಾಲಯ ನೀಡಿದ್ದಾರೆ. ಕಟ್ಟಕಡೆಯ ವ್ಯಕ್ತಿಗೆ ಏನು ಬೇಕೆಂದು ಅರಿತು ಯೋಜನೆಗಳನ್ನು ನೀಡಿದ್ದಾರೆ ಎಂದರು.
ದೇಶದ ಭವಿಷ್ಯ ರೂಪಿಸುವ, ಮಕ್ಕಳ ಬದುಕನ್ನು ಬಂಗಾರ ಮಾಡುವ, ಮಹಿಳಾ ಸಬಲೀಕರಣ ಮಾಡುವ ಗ್ಯಾರಂಟಿಯೇ ಮೋದಿ ಗ್ಯಾರಂಟಿ.
ತಾತ್ಕಾಲಿಕ ಅನುಕೂಲಕ್ಕಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಕಾಂಗ್ರೆಸ್ ಸರ್ಕಾರ ಒಂದೂವರೆ ಲಕ್ಷ ಕೋಟಿ ರೂ. ಸಾಲ ಮಾಡಿದೆ. ಇಂತಹ ಪಕ್ಷ ರಾಜ್ಯಕ್ಕೆ ಬೇಡ ಎಂದರು.
ಭಾರತೀಯ ಜನತಾ ಪಾರ್ಟಿ ನಾಯಕರ ಪಕ್ಷವಲ್ಲ, ಇದು ಕಾರ್ಯಕರ್ತರ ಪಕ್ಷ. ಆದ್ದರಿಂದಲೇ ಬಿಜೆಪಿಯಲ್ಲಿ ಅತಿ ಹೆಚ್ಚು ಕಾರ್ಯಕರ್ತರಿದ್ದಾರೆ. 20 ಕೋಟಿಗೂ ಅಧಿಕ ಕಾರ್ಯಕರ್ತರನ್ನು ಬಿಜೆಪಿ ಹೊಂದಿದ್ದು, ಇದು ಜಗತ್ತಿನ ಯಾವ ಭಾಗದಲ್ಲೂ ಇಲ್ಲ. ಜೆಡಿಎಸ್ ಸಹೋದರರೊಂದಿಗೆ ಬಿಜೆಪಿ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು ಎಂದರು.
ಈ ಚುನಾವಣೆ ಸಾಮಾನ್ಯ ಎಂದು ಭಾವಿಸಬಾರದು. ಇದು ಶಾಶ್ವತವಾದ ಮೋದಿ ಗ್ಯಾರಂಟಿ ನೀಡುವ ಚುನಾವಣೆ. ಕೇಂದ್ರ ಸರ್ಕಾರದ ಅನುದಾನಗಳು ಯಾವುದೇ ಏಜೆಂಟ್ ಇಲ್ಲದೆ ನೇರವಾಗಿ ಫಲಾನುಭವಿಯ ಖಾತೆಗೆ ಬರುತ್ತಿದೆ. ಇಂತಹ ಪಾರದರ್ಶಕ ಆಡಳಿತವನ್ನು ಪ್ರಧಾನಿ ಮೋದಿ ನೀಡಿದ್ದಾರೆ ಎಂದರು.
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರಾಜ್ಯದ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ರಾಜ್ಯ ಕಾರ್ಯದರ್ಶಿ ಶ್ರೀ ಸಿ.ಮುನಿರಾಜು, ಜಿಲ್ಲಾಧ್ಯಕ್ಷ ಶ್ರೀ ರಾಮಲಿಂಗಪ್ಪ, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.