ಇಡೀ ಭಾರತ ದೇಶ ಮತ್ತು ದೇಶವಾಸಿಗಳು ಹೆಮ್ಮೆ ಪಡುವಂತಹ ಕ್ಷಣಕ್ಕೆ ಈ ದಿನ ಸಾಕ್ಷಿಯಾಗಿದೆ. ಹೌದು, ದೇಶದ ಹೆಮ್ಮೆಯನ್ನು ಚಂದ್ರನ ಕಡೆಗೆ ಹೊತ್ತೊಯ್ದ ಚಂದ್ರಯಾನ 3 ಯಶಸ್ವಿ ಉಡಾವಣೆ ಇಂದು ನಡೆದಿದ್ದು, ಇಸ್ರೋ ದಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿದೆ. ಮೂರನೇ ಬಾರಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಯಶಸ್ವಿ ಉಡಾವಣೆ ಯನ್ನು ಮಾಡುವ ಮೂಲಕ ವಿಶ್ವದ ಗಮನವನ್ನು ತನ್ನ ಕಡೆಗೆ ಸೆಳೆದಿದ್ದು, ಚಂದ್ರಯಾನ 3 ಯಶಸ್ವಿ ಉಡಾವಣೆಯ ಸುದ್ದಿ ಗಳು ಈಗ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಸದ್ದನ್ನು ಮಾಡುತ್ತಿದೆ.
ಆಂದ್ರಪ್ರದೇಶದ ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನೌಕೆಯ ಉಡಾವಣೆ ಕಾರ್ಯ ನಡೆದಿದೆ. ಇಸ್ರೋ ದ ಅಧ್ಯಕ್ಷ ಎಸ್ ಸೋಮನಾಥ್ ಅವರು ಉಡಾವಣೆಯ ಕಾರ್ಯದಲ್ಲಿ ಶ್ರಮ ವಹಿಸಿದ ಪ್ರತಿಯೊಬ್ಬರಿಗೂ ಸಹಾ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಬಾಹ್ಯಾಕಾಶ ನೌಕೆಯು ಆಗಸ್ಟ್ ಮೂರನೇ ವಾರ ಚಂದ್ರನ ಅಂಗಳವನ್ನು ಪ್ರವೇಶ ಮಾಡಲಿದೆ ಎನ್ನಲಾಗಿದೆ.
ಚಂದ್ರಯಾನ 3 ಮಿಷನ್ ಗೆ ಖರ್ಚಾಗಿದ್ದು 600 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. 2003 ನೇ ಇಸವಿಯಲ್ಲಿ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಚಂದ್ರಯಾನದ ಕನಸನ್ನು ಕಂಡಿದ್ದರು. ನಮ್ಮ ವಿಜ್ಞಾನಿಗಳ ಅವಿರತ ಸಮರ್ಪಣೆಗೆ ಇದು ಸಾಕ್ಷಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸಹಾ ಚಂದ್ರಯಾನ 3 ಕ್ಕೆ ಶುಭ ಹಾರೈಸುತ್ತಿದ್ದಾರೆ.