ಬಾಲಿವುಡ್ ಸ್ಟಾರ್ ನಟ ಕಿಂಗ್ ಖಾನ್ ಖ್ಯಾತಿಯ ನಟ ಶಾರೂಖ್ ಖಾನ್ ಅಮೆರಿಕಾದಲ್ಲಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆಯನ್ನು ಪಡೆದಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಂದಿದೆ. ನಟ ಶಾರುಖ್ ಖಾನ್ ಅವರಿಗೆ ಅಪಘಾತವಾಗಿದ್ದು ಅವರ ಮೂಗಿಗೆ ಗಾಯವಾಗಿದ್ದು, ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಶಾರುಖ್ ಖಾನ್ ಅಮೆರಿಕಾದ ಲಾಸ್ ಎಂಜಲೀಸ್ ನಲ್ಲಿ ಸಿನಿಮಾದ ಚಿತ್ರೀಕರಣದ ಕೆಲಸಗಳಲ್ಲಿ ತೊಡೆಗಿಕೊಂಡಿದ್ದರು. ಈ ವೇಳೆ ಚಿತ್ರೀಕರಣ ನಡೆಯುತ್ತಿದ್ದ ಸ್ಥಳದಲ್ಲಿ ಅವಘಡ ನಡೆದಿದ್ದು, ಶಾರುಖ್ ಖಾನ್ ಅವರಿಗೆ ಗಾಯವಾಗಿದೆ ಎಂದು ಮಾಹಿತಿಗಳು ತಿಳಿದು ಬಂದಿದೆ.
ನಟನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆಯನ್ನು ಕೊಡಿಸಲಾಗಿದೆ. ತೀವ್ರ ರಕ್ತಸ್ರಾವ ಆಗುತ್ತಿದ್ದ ಕಾರಣದಿಂದ ಶಸ್ತ್ರಚಿಕಿತ್ಸೆಗೆ ಅವರು ಒಳಗಾಗಿದ್ದಾರೆ. ಶಾರುಖ್ ಖಾನ್ ಗೆ ಅಪಘಾತ ಸಂಭವಿಸಿದೆ ಎನ್ನುವ ಸುದ್ದಿ ವೈರಲ್ ಆದ ಕೂಡಲೇ ಅವರ ಅಭಿಮಾನಿಗಳಲ್ಲಿ ತೀವ್ರವಾದ ಆತಂಕ ಉಂಟಾಗಿತ್ತು. ಅನೇಕರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದರು. ಪ್ರಸ್ತುತ ನಟ ಆರಾಮಾಗಿ ಇದ್ದಾರೆ, ಚಿಕಿತ್ಸೆಯ ನಂತರ ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ ಎಂದೂ, ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.
ಶಾರುಖ್ ಖಾನ್ ತಮ್ಮ ಹೊಸ ಸಿನಿಮಾದ ಚಿತ್ರೀಕರಣಕ್ಕಾಗಿ ಲಾಸ್ ಏಂಜಲೀಸ್ ಗೆ ಹೋಗಿದ್ದರು. ಆಗ ಶೂಟಿಂಗ್ ಸೆಟ್ ನಲ್ಲಿ ಇಂತಹದೊಂದು ಅನಿರೀಕ್ಷಿತ ಅವಘಡ ಸಂಭವಿಸಿದೆ. ನಟನ ಮೂಗಿನಲ್ಲಿ ರಕ್ತಸ್ರಾವ ತೀವ್ರವಾದ ಕಾರಣ ಅದನ್ನು ನಿಲ್ಲಿಸಲು ಸಣ್ಣ ಶಸ್ತ್ರ ಚಿಕಿತ್ಸೆಯನ್ನು ಮಾಡಬೇಕಾಯಿತೆಂದು ವೈದ್ಯರು ಹೇಳಿದರೆಂದು ಆಪ್ತ ಮೂಲಗಳು ಮಾಧ್ಯಮಗಳಿಗೆ ಮಾಹಿತಿಯನ್ನು ಹಂಚಿಕೊಂಡಿದೆ ಆದರೆ ಅವಘಡ ಸಂಭವಿಸಿದ್ದು ಹೇಗೆ ಎನ್ನುವ ವಿಚಾರ ಮಾತ್ರ ಇನ್ನು ಬಹಿರಂಗವಾಗಿಲ್ಲ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಶಾರುಖ್ ಭಾರತಕ್ಕೆ ಮರಳಿ ಬಂದಿದ್ದಾರೆ ಎನ್ನಲಾಗಿದ್ದು, ಅವರ ಮೂಗಿಗೆ ಬ್ಯಾಂಡೇಜ್ ಹಾಕಿರುವುದನ್ನು ಕೆಲವರು ನೋಡಿದ್ದಾರೆ ಎಂದು ಸುದ್ದಿಯಾಗಿದೆ. ಪ್ರಸ್ತುತ ನಟ ತಮ್ಮ ಮನೆಯಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದು, ಒಂದಷ್ಟು ದಿನಗಳ ಕಾಲ ಚಿತ್ರೀಕರಣದಿಂದ ಬ್ರೇಕ್ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಈ ವಿಚಾರವಾಗಿ ಶಾರೂಖ್ ಖಾನ್ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.