ತನ್ನ ಪತಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಪಾಕಿಸ್ತಾನದಲ್ಲಿರುವ ಗೆಳೆಯನನ್ನು ಭೇಟಿ ಮಾಡಲು, ಗಂಡನಿಗೆ ಸುಳ್ಳು ಹೇಳಿ ದೇಶದ ಗಡಿ ದಾಟಿ ಹೋಗಿದ್ದ ರಾಜಸ್ಥಾನದ ಮಹಿಳೆ ಅಂಜು ವಿಷಯ ಬಹಳ ದೊಡ್ಡ ಚರ್ಚೆಯ ವಿಷಯವಾಗಿ ಬದಲಾಗಿತ್ತು ಮತ್ತು ದೊಡ್ಡ ಮಟ್ಟದಲ್ಲಿ ಸುದ್ದಿಗಳಾಗಿತ್ತು. ಪಾಕಿಸ್ತಾನಕ್ಕೆ ಹೋದ ಈಕೆ ಅಲ್ಲಿ ಗೆಳೆಯನನ್ನು ಮದುವೆಯಾಗಿದ್ದಾರೆ ಎಂದು ವರದಿಗಳಾಗಿತ್ತು. ಅಲ್ಲದೇ ಬುರ್ಖಾ ಧರಿಸಿದ್ದ ಅಂಜು ವೀಡಿಯೋ ಸಹಾ ವೈರಲ್ ಆಗಿತ್ತು.
ಹೀಗೆ ಪಾಕಿಸ್ತಾನ ಸೇರಿ, ಅಲ್ಲಿರುವ ಅಂಜು ಇದೀಗ ಹೊಸ ರಾಗವನ್ನು ತೆಗೆದಿದ್ದಾರೆ. ಹೌದು ಅಂಜು ಈಗ ತಾನು ಆದಷ್ಟು ಬೇಗ ಭಾರತಕ್ಕೆ ಹಿಂತಿರುಗಬೇಕೆಂದು, ಹಗಲು ರಾತ್ರಿ ನನಗೆ ನನ್ನ ಮಕ್ಕಳು ನೆನಪಾಗುತ್ತಿದ್ದಾರೆ, ನಾನು ನನ್ನ ಪುಟ್ಟ ಮಗುವನ್ನು ಭೇಟಿ ಮಾಡಬೇಕು, ನನಗೆ ಪ್ರತಿದಿನ ಅವಮಾನವಾಗುತ್ತಿದೆ ಎಂದು ತನ್ನ ವರಸೆಯನ್ನು ಬದಲಾಯಿಸಿದ್ದು, ಈಗ ಆದಷ್ಟು ಬೇಗ ಭಾರತಕ್ಕೆ ಮರಳಿ ಬಂದರೆ ಸಾಕು ಎನ್ನುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ರಾಜಸ್ಥಾನದ ಆಲ್ವಾರ್ ನಿಂದ ಪತಿಗೆ ಸುಳ್ಳು ಹೇಳಿ ಗೆಳೆಯನ ಭೇಟಿಗಾಗಿ ಅಂಜು ಪಾಕಿಸ್ತಾನಕ್ಕೆ ಹೋದ ಮೇಲೆ ಅಲ್ಲಿ ಗೆಳೆಯನ ಜೊತೆಗಿದ್ದ ಫೋಟೋ, ವೀಡಿಯೋಗಳು ವೈರಲ್ ಆಗಿದ್ದವು. ಈಗ ಅಂಜು ಕುಟುಂಬವನ್ನು ಬಿಟ್ಟು ಇರಲು ಸಾಧ್ಯವಿಲ್ಲ, ನಾನು ಮರಳಿ ಬರುತ್ತೇನೆ, ಭಾರತಕ್ಕೆ ಬಂದ ಮೇಲೆ ನಾನು ನನಗೆ ಎದುರಾಗುವ ಎಲ್ಲಾ ಪ್ರಶ್ನೆಗಳಿಗೂ ಸಹಾ ಉತ್ತರ ನೀಡಲು ಸಿದ್ದವಾಗಿದ್ದೇನೆ ಎಂದಿದ್ದಾರೆ ಎನ್ನುವ ಸುದ್ದಿಗಳು ವರದಿಯಾಗಿದೆ.