ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಯು ಈಗಾಗಲೇ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಏಕೆ ಮೌನವಾಗಿದೆ ಎಂದು ಈಗಾಗಲೇ ವಿಪಕ್ಷಗಳೆಲ್ಲಾ ಸೇರಿ ಕೇಂದ್ರವನ್ನು ಟೀಕೆ ಮಾಡುತ್ತಾ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗ ಇದೇ ವಿಚಾರವಾಗಿ ಮಾತನಾಡುತ್ತಾ ಕೇರಳ ಕ್ಯಾಥೋಲಿಕ್ ಬಿಷಪ್ ಕೌನ್ಸಿಲ್ ಅಧ್ಯಕ್ಷ ನೀಡಿರುವ ಹೇಳಿಕೆಯೊಂದು ಸಂಚಲನ ಸೃಷ್ಟಿಸಿದೆ.
ಹೌದು, ಮಣಿಪುರದ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷದ ಕುರಿತು ಕೇರಳ ಕ್ಯಾಥೋಲಿಕ್ ಬಿಷಪ್ ಕೌನ್ಸಿಲ್ ಅಧ್ಯಕ್ಷ ಕಾರ್ಡಿನಲ್ ಮಾರ್ ಕ್ಲೀಮಿಸ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅವರು ಮಾತನಾಡುತ್ತಾ,, ನಾವು ಭಾರತದಿಂದ ಕ್ರಿಶ್ಚಿಯಾನಿಟಿಯನ್ನು ನಾಶಪಡಿಸಬಹುದು ಎಂದು ಯಾರೂ ಕೂಡಾ ಯೋಚಿಸಲು ಹೋಗಬಾರದೆಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಇದೇ ವೇಳೆ ಅವರು, ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಕೇಂದ್ರದ ಮಧ್ಯಸ್ಥಿಕೆ ಬಗ್ಗೆ ಹಾಗೂ ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೌನವನ್ನು ಮುರಿಯಬೇಕೆಂದು ಆಗ್ರಹಿಸಿದ್ದಾರೆ. ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿರ್ಧಾರದ ವಿರುದ್ಧವಾಗಿ ಕುಕಿ ಸಮುದಾಯ ಹಿಂಸಾಚಾರಕ್ಕೆ ಮುಂದಾದ ಕಾರಣ ಕಳೆದ 2 ತಿಂಗಳಿನಿಂದ ನಡೆದ ಹಿಂಸಾಚಾರದಲ್ಲಿ ನೂರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ.