ಕರ್ನಾಟಕ ರಾಜ್ಯ ಸರ್ಕಾರವು ಶಕ್ತಿ ಯೋಜನೆಯನ್ನು ಜಾರಿಗೆ ತಂದಿರುವುದು ಸಾರ್ವಜನಿಕ ಸಾರಿಗೆಗೆ ಒಂದು ರೀತಿಯಲ್ಲಿ ಬಲ ನೀಡಿದಂತೆ ಆಗಿದೆ. ಈ ಯೋಜನೆ ಜಾರಿಯಾದ ನಂತರದ ದಿನಗಳಲ್ಲಿ ಪ್ರತಿ ದಿನ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಏರಿಕೆ ಕಂಡು ಬಂದಿದ್ದು, ಇದು 84.15 ಲಕ್ಷದಿಂದ 1.05 ಕೋಟಿಯವರೆಗೆ ತಲುಪಿದೆ ಎಂದು ಮಾನ್ಯ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ. ಸಾರಿಗೆ ಸಚಿವರು ನಗರದ ಕೆ ಎಸ್ ಆರ್ ಟಿ ಸಿ ಕೇಂದ್ರ ಕಛೇರಿಯಲ್ಲಿ ಮಾತನಾಡಿದ್ದು, ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿದ ಸಾರಿಗೆ ಸಚಿವರು, ಬಳಿಕ ಮಾತನಾಡುತ್ತಾ, ‘ಪ್ರಯಾಣಿಕರ ಸಂಖ್ಯೆಯಲ್ಲಿನ ಹೆಚ್ಚಳವು ‘ಶಕ್ತಿ’ ಯೋಜನೆ ಯಶಸ್ವಿ ಆಗಿರುವುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಸಾರಿಗೆ ಸಂಸ್ಥೆಗಳ ಸಬಲೀಕರಣಕ್ಕೆ ಅನುವಾಗುವ ಹಾಗೆ ಹೊಸ ಬಸ್ ಗಳ ಸೇರ್ಪಡೆ, ಪುನಶ್ಚೇತನ, ಪರಿಣಾಮಕಾರಿಯಾಗಿ ಮಾಹಿತಿ, ತಂತ್ರಜ್ಞಾನ ಬಳಕೆ, ಕಾರ್ಮಿಕ ಸ್ನೇಹಿತ ಉಪಕ್ರಮಗಳು, ಸಿಬ್ಬಂದಿ ನೇಮಕ ಸೇರಿದಂತೆ ಇತರೆ ಕ್ರಮಗಳನ್ನು ಆದ್ಯತೆ ಮೇರೆ ಅನುಷ್ಠಾನಕ್ಕೆ ತರಬೇಕಿದೆ ಎಂದಿದ್ದಾರೆ.
ಇದೇ ವೇಳೆ ಅವರು, ಸಂಪನ್ಮೂಲ ಕ್ರೋಢೀಕರಣದ ಬಗ್ಗೆಯೂ ಕ್ರಿಯಾಯೋಜನೆ ಸಿದ್ಧಪಡಿಸಿ, ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿರುವ ಖಾಲಿ ಜಾಗಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎನ್ನುವ ವಿಚಾರವನ್ನು ಸಹಾ ಹೇಳಿದ್ದಾರೆ. ಅಲ್ಲದೇ ವಾಣಿಜ್ಯ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ, ಕಾಲಮಿತಿಯಲ್ಲಿ ಅದನ್ನು ಜಾರಿಗೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.