ಮಾನವನ ದೇಹಕ್ಕೆ ಪ್ರೋಟೀನ್ ಅತ್ಯವಶ್ಯಕವಾಗಿದೆ. ಪ್ರೋಟೀಸ್ ಸರಿಯಾದ ಪ್ರಮಾಣದಲ್ಲಿ ಸಿಗದೇ ಹೋದರೆ, ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಅನೇಕ ವೈದ್ಯಕೀಯ ತಜ್ಞರು ನಮ್ಮ ದೇಹಕ್ಕೆ ಅಗತ್ಯ ಇರುವ ಪ್ರೋಟೀನ್ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ನಮ್ಮ ಆಹಾರದಲ್ಲಿ ಮೊಟ್ಟೆ, ಮಾಂಸವನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲಿ ಬಹಳಷ್ಟು ಜನರು ಸಸ್ಯಾಹಾರಿಗಳಾಗಿದ್ದು, ಅವರು ಮೊಟ್ಟೆ ಮಾಂಸಗಳನ್ನು ಸೇವಿಸುವುದಿಲ್ಲ. ಅಂತಹವರು ಪ್ರೋಟೀನ್ ಗಾಗಿ ಈ ಕೆಳಗಿನ ಆಹಾರ ಪದಾರ್ಥಗಳನ್ನು ಸೇವಿಸಬಹುದು.
ಹೂಕೋಸು: ಹೂಕೋಸು ಹೆಚ್ಚಿನ ಪ್ರೋಟೀನ್, ಕ್ಯಾಲೋರಿ, ಮೆಗ್ನೀಷಿಯಮ್ ಮತ್ತು ಕಬ್ಬಿಣವನ್ನು ಹೊಂದಿದೆ. ಅವುಗಳನ್ನು ಹೆಚ್ಚಾಗಿ ಚಳಿಗಾಲದಲ್ಲಿ ಬೆಳೆಯಲಾಗುತ್ತದೆ. ಆದಾಗ್ಯೂ, ಅವು ವರ್ಷವಿಡೀ ಮಾರುಕಟ್ಟೆಯಲ್ಲಿ ಲಭ್ಯವಿರುವ ತರಕಾರಿಯಾಗಿದೆ. ಹಾಗಾಗಿ ಇವುಗಳನ್ನು ಆಹಾರದಲ್ಲಿ ಸೇರಿಸಿಕೊಂಡರೆ ದೇಹದಲ್ಲಿ ಪ್ರೊಟೀನ್ ಕೊರತೆ ಸಮಸ್ಯೆ ಉಂಟಾಗುವುದಿಲ್ಲ.
ಬ್ರೊಕೊಲಿ : ಇದನ್ನು ಯಾವಾಗಲೂ ಸಹಾ ಆರೋಗ್ಯದ ಒಂದು ಉತ್ತಮ ಮೂಲ ಎಂದು ಹೇಳಲಾಗುತ್ತದೆ. ಇದರಲ್ಲಿ ಪ್ರೋಟೀನ್ ಮಾತ್ರವಲ್ಲದೇ ಕಬ್ಬಿಣದ ಅಂಶವೂ ಸಮೃದ್ಧವಾಗಿದ್ದು, ಇದರ ಸೇವನೆಯು ನಮಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಆದ್ದರಿಂದ, ಇದನ್ನು ದೈನಂದಿನ ಆಹಾರದಲ್ಲಿ ಸೇರಿಸಲು ಮರೆಯಬೇಡಿ. ಇದರಿಂದ ಸ್ನಾಯುಗಳು ಬಲಗೊಳ್ಳುತ್ತವೆ.
ಪಾಲಕ್ ಸೊಪ್ಪು: ಪಾಲಕ್ ಸೊಪ್ಪಿನ ರಾಜನಾಗಿದೆ. ಇದರಲ್ಲಿ ಪ್ರೋಟೀನ್, ವಿಟಮಿನ್ ಬಿ ಮತ್ತು ಫೈಬರ್ ಸಮೃದ್ಧವಾಗಿದೆ. ಇವು ನಮ್ಮ ದೇಹದಲ್ಲಿ ಸ್ನಾಯುಗಳನ್ನು ಬಲಗೊಳಿಸುತ್ತವೆ. ಸಾಧ್ಯವಾದಷ್ಟು ನಿಮ್ಮ ಆಹಾರದಲ್ಲಿ ಪಾಲಕ್ ಅನ್ನು ಸೇರಿಸಲು ಮರೆಯದಿರಿ.
ಅಣಬೆಗಳು: ಅಣಬೆ ಅಥವಾ ಮಶ್ರೂಮ್ ಸಹಾ ಪ್ರೋಟೀನ್ ಭರಿತ ಆಹಾರವಾಗಿದ್ದು, ಇದರ ಸೇವನೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದಕ್ಕಾಗಿ, ಅಣಬೆಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇವುಗಳನ್ನು ತಿನ್ನುವುದರಿಂದ ದೇಹದಲ್ಲಿ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.