ಜೀ ಕನ್ನಡ ವಾಹಿನಿಯ ಸುಪ್ರಸಿದ್ಧ ರಿಯಾಲಿಟಿ ಶೋ ಗಳಲ್ಲಿ ಸರಿಗಮಪ ಸಾಕಷ್ಟು ಜನಪ್ರಿಯತೆಯನ್ನು ಮತ್ತು ಜನಮನ್ನಣೆಯನ್ನು ಪಡೆದುಕೊಂಡಿರುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ಈಗಾಗಲೇ 19 ಯಶಸ್ವಿ ಸೀಸನ್ ಗಳನ್ನು ಮುಗಿಸಿದ್ದು, ಈಗ 20ನೇ ಸೀಸನ್ ಪ್ರಾರಂಭ ಮಾಡಲು ಬಹಳ ದೊಡ್ಡ ಮಟ್ಟದಲ್ಲಿ ವಾಹಿನಿಯು ಸಿದ್ಧತೆಯನ್ನು ನಡೆಸಿದ್ದು, ವಾಹಿನಿಯು ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪ್ರೊಮೋ ನೆಟ್ಟಿಗರ ಮತ್ತು ಕಾರ್ಯಕ್ರಮದ ಅಭಿಮಾನಿಗಳ ಗಮನವನ್ನು ವಿಶೇಷವಾಗಿ ಸೆಳೆಯುತ್ತಿದ್ದು, ಅಪಾರವಾದ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಸರಿಗಮಪ ರಿಯಾಲಿಟಿ ಶೋ ಪ್ರಾರಂಭವಾದ ದಿನಗಳಲ್ಲಿ ಕೇವಲ ಬೆಂಗಳೂರು ನಗರದಲ್ಲಿ ಮಾತ್ರವೇ ಆಡಿಷನ್ ಗಳನ್ನು ನಡೆಸಲಾಗುತ್ತಿತ್ತು. ಕಾರ್ಯಕ್ರಮದ ಜನಪ್ರಿಯತೆ ಹೆಚ್ಚಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಡಿಷನ್ ನಡೆಸುವ ಮೂಲಕ ಅಲ್ಲಿನ ಗಾಯನ ಪ್ರತಿಭೆಗಳಿಗೆ ಸದಾವಕಾಶವನ್ನು ಒದಗಿಸಿಕೊಡಲಾಯಿತು. ಈಗ ವಾಹಿನಿಯು ಈ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ನಿರ್ಧಾರವನ್ನು ಮಾಡಿದ್ದು, ವಿಶ್ವಾದ್ಯಂತ ಇರುವ ಕನ್ನಡಿಗರಿಗಾಗಿ ಒಂದು ನೂತನ ರೀತಿಯ ಆಡಿಷನ್ ಮಾಡಲು ಸಜ್ಜಾಗಿದೆ.
ಜೀ ಕನ್ನಡ ವಾಹಿನಿ ವಿಶ್ವದಾದ್ಯಂತ ಸಂಚಾರ ಮಾಡಿ ಅಲ್ಲಿನ ಗಾಯನ ಪ್ರತಿಭೆಗಳನ್ನು ಕರೆತರುವ, ಜನರ ಮುಂದಿಡುವ ಪ್ರಯತ್ನಕ್ಕೆ ಮುಂದಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಾಹಿನಿಯ ಈ ಪ್ರಯತ್ನಕ್ಕೆ ಅಪಾರವಾದ ಮೆಚ್ಚುಗೆಗಳು ಹರಿದು ಬಂದಿವೆ. ವಿಶ್ವಾದ್ಯಂತ ಆಡಿಷನ್ ನಡೆಸುವ ವಿಚಾರವಾಗಿ ವಾಹಿನಿಯು ಹಂಚಿಕೊಂಡಿರುವ ಪ್ರೊಮೋದಲ್ಲಿ ಒಂದಷ್ಟು ಪ್ರಮುಖ ವಿಚಾರಗಳನ್ನು ತಿಳಿಸಲಾಗಿದ್ದು, ಇದನ್ನು ನೋಡಿ ಕಾರ್ಯಕ್ರಮದ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.
ಸಪ್ತಸಾಗರದಾಚೆ ಸ್ವರ ಸಂಚಾರ ಎನ್ನುವ ಶೀರ್ಷಿಕೆಯಲ್ಲಿ ವಿಡಿಯೋವನ್ನು ಶೇರ್ ಮಾಡಲಾಗಿದೆ. ಪ್ರಪ್ರಥಮ ಬಾರಿಗೆ ವಿದೇಶಗಳಲ್ಲಿ ಆಡಿಷನ್ಸ್, ಸರಿಗಮಪ ಈಗ ವಿಶ್ವಕ್ಕೆ ವಿಸ್ತರಿಸಲಿದೆ. ಕನ್ನಡದ ಸ್ವರ ಸಂಭ್ರಮ ಈಗ ವಿಶ್ವ ಸಂಭ್ರಮವಾಗಲಿದೆ, ವಿಶ್ವ ಕನ್ನಡಿಗರಿಗಾಗಿ ಜೀ ಕನ್ನಡ ಶುರು ಮಾಡುತ್ತಿದೆ ಸರಿಗಮಪ ಸೀಸನ್ 20 ವರ್ಲ್ಡ್ ವೈಡ್ ಆಡಿಷನ್ ಶೀಘ್ರದಲ್ಲಿ ಎಂದು ಪ್ರೊಮೋದಲ್ಲಿ ಹೇಳಲಾಗಿದೆ. ಪ್ರೊಮೋ ವೈರಲ್ ಆಗಿದ್ದು ಕಾಮೆಂಟ್ ಗಳ ಮೂಲಕ ಅಭಿಮಾನಿಗಳು ತಮ್ಮ ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.