ತಮನ್ನಾ ಭಾಟಿಯಾ ದಕ್ಷಿಣ ಸಿನಿಮಾ ರಂಗದಲ್ಲಿ ವಿಶೇಷವಾಗಿ ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಸರನ್ನು ಮಾಡಿರುವ ಸ್ಟಾರ್ ನಟಿ. ದಕ್ಷಿಣದಲ್ಲಿ ಮಾತ್ರವೇ ಅಲ್ಲದೇ ಬಾಲಿವುಡ್ ನಲ್ಲಿ ನಟಿಗೆ ಸಾಕಷ್ಟು ಹೆಸರು ಇದೆ. ಇತ್ತೀಚಿಗಷ್ಟೇ ನಟಿ ತಮನ್ನಾ ಅವರು ತಾವು ದಕ್ಷಿಣ ಸಿನಿಮಾರಂಗದಲ್ಲಿ ನಟಿಸಿರುವ ಸ್ಟಾರ್ ಗಳ ಜೊತೆಗಿನ ತಮ್ಮ ವೃತ್ತಿ ಜೀವನದ ಕೆಲವು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ನಟಿ ದಕ್ಷಿಣದ ಸ್ಟಾರ್ ಗಳನ್ನು ಹಂಚಿಕೊಂಡಿದ್ದಾರೆ.
ತಮನ್ನಾ ಮಾತನಾಡುತ್ತಾ, ದಕ್ಷಿಣದ ನಟರು ಬಹಳ ಗೌರವಾನ್ವಿತರು ಎನ್ನುತ್ತಲೇ ಇಲ್ಲಿನ ಸೂಪರ್ ಸ್ಟಾರ್‌ಗಳು ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸಿದ್ದಾರೆಂದು ಕೂಡಾ ನಟಿ ಹೊಗಳಿದ್ದಾರೆ. ಮಿಲ್ಕಿ ಬ್ಯೂಟಿ ತಮನ್ನಾ ವಿಶೇಷವಾಗಿ ರಾಮ್ ಚರಣ್ ಮತ್ತು ನಾಗಚೈತನ್ಯ ಹೆಸರನ್ನು ಹೇಳಿರುವುದು ಗಮನಾರ್ಹವಾಗಿದೆ. ರಾಮ್ ಚರಣ್, ನಾಗ ಚೈತನ್ಯ ಮತ್ತು ಇತರ ನಟರನ್ನು ಅವರ ಪೋಷಕರು ತುಂಬಾ ಚೆನ್ನಾಗಿ ಬೆಳೆಸಿದ್ದಾರೆ ಎಂದು ನಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾನು ಒಬ್ಬ ದೊಡ್ಡ ಸ್ಟಾರ್ ಆಗುತ್ತೇನೆಂದು ಮೊದಲು ನಂಬಿದವರು ಚಿರಂಜೀವಿ ಎನ್ನುವ ವಿಚಾರವನ್ನು ತಮನ್ನಾ ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ. ನಾನು ರಾಮ್ ಚರಣ್ ಜೊತೆ ಸಿನಿಮಾ ಮಾಡುತ್ತಿದ್ದ ಸಂದರ್ಭದಲ್ಲಿ ನಾನಿನ್ನೂ ದೊಡ್ಡ ಹೆಸರು ಮಾಡಿರಲಿಲ್ಲ, ಆಗ ಮೆಗಾಸ್ಟಾರ್ ನನಗೆ, ನೀವು ಸ್ಟಾರ್ ಆಗುತ್ತೀರಿ ಎನ್ನುವ ಮಾತನ್ನು ಹೇಳಿದ್ದರು ಎಂದು ತಮನ್ನಾ ಹೇಳಿದ್ದಾರೆ. ಇದೇ ವೇಳೆ ನಾಗಚೈತನ್ಯ ಬಗ್ಗೆ ಸಹಾ ನಟಿ ಮಾತನಾಡಿದ್ದಾರೆ.
ನಾನು ಚೈತನ್ಯ (ನಾಗ ಚೈತನ್ಯ), ನಾಗಾರ್ಜುನ ಸರ್ ಅವರ ಮಗನನ್ನು ನೋಡಿದ್ದೇನೆ, ಅವರು ತಮ್ಮ ಮಕ್ಕಳನ್ನು ತುಂಬಾ ಸಂಸ್ಕಾರ ನೀಡಿ, ಬೆಳೆಸಿದ್ದಾರೆ. ಒಳ್ಳೆಯ ನಡತೆ, ಸುಸಂಸ್ಕೃತ, ಗೌರವಾನ್ವಿತರಾಗಿದ್ದಾರೆ ಅವರು. ನನ್ನ ಪ್ರಕಾರ, ಜಗತ್ತಿನಲ್ಲಿ ಸಾಮಾನ್ಯವಾಗಿ ಮಹಿಳೆಯರ ಬಗ್ಗೆ ಗೌರವ ನೀಡುವವರು ಅಪರೂಪ, ನಮ್ಮ ದೇಶದಲ್ಲಿ ಅಂತಹವರು ಬಹಳ ಕಡಿಮೆ.
ಆದರೆ ನಾನು ದಕ್ಷಿಣದಲ್ಲಿ ಕೆಲಸ ಮಾಡಿರುವ ಕೆಲವು ಪುರುಷರೊಂದಿಗೆ ನನಗೆ ಬಹಳ ಗೌರವ ದೊರೆತಿದೆ. ಅವರು ತುಂಬಾ ಸಭ್ಯರು, ಅವರು ಸೆಟ್ ನಲ್ಲಿರುವ ಮಹಿಳೆಯರು ಆರಾಮವಾಗಿ ಇರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಅಂತಹವರಲ್ಲಿ ನಟ ಚಿರಂಜೀವಿ ಅವರು ಒಬ್ಬರು ಎಂದು ನಟಿ ತಮನ್ನಾ ಬಹಳ ಖುಷಿಯಾಗಿ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.