ಕನ್ನಡದ ಜನಪ್ರಿಯ ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನಾ ಅವರು ಕೆಲವು ದಿನಗಳ ಹಿಂದೆ ಹೃದಯಘಾತದಿಂದ ನಿಧನರಾಗಿದ್ದಾರೆ. ಸ್ಪಂದನಾ ಅವರ ನಿಧನದ ಸುದ್ದಿ ಎಲ್ಲರಿಗೂ ಸಹಾ ಶಾಕ್ ನೀಡಿತ್ತು. ಇದೀಗ ಸ್ಪಂದನಾ ಅವರ ಉತ್ತರಕ್ರಿಯೆಗೆ ಅವರ ಕುಟುಂಬ ವರ್ಗವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಈ ವೇಳೆ ವಿಜಯ ರಾಘವೇಂದ್ರ ಅವರ ಕುಟುಂಬವು ಅಭಿಮಾನಿಗಳಿಗೆ ಇದರಲ್ಲಿ ಭಾಗವಹಿಸುವಂತೆ ಆಹ್ವಾನವನ್ನು ನೀಡಿದೆ.

ಆತ್ಮೀಯರೇ ನಮ್ಮ ಮನೆಯ ಮಗಳು ಸ್ಪಂದನಾ ವಿಜಯ ರಾಘವೇಂದ್ರ ಅವರು ಆಗಸ್ಟ್ 6 ರಂದು ನಮ್ಮನ್ನು ಅಗಲಿರುವುದು ನಿಮಗೆಲ್ಲರಿಗೂ ತಿಳಿದ ವಿಷಯ. ಉತ್ತರಕ್ರಿಯೆ ಆಗಸ್ಟ್ 16ರ ಬುಧವಾರದಂದು ಮಲ್ಲೇಶ್ವರ ಸ್ವಗೃಹದಲ್ಲಿ ಬೆಳಗ್ಗೆ 8 ಗಂಟೆಯಿಂದ ಶಾಂತಿ ಹೋಮ ನಡೆಯಲಿದೆ. ಮಧ್ಯಾಹ್ನ ಒಂದು ಗಂಟೆಯಿಂದ ಕೋದಂಡರಾಮಪುರದ ಯಂಗ್ ಸ್ಟರ್ಸ್ ಕಬ್ಬಡಿ ಆಟದ ಮೈದಾನದಲ್ಲಿ ಭೋಜನವನ್ನು ಹಮ್ಮಿಕೊಂಡಿದ್ದೇವೆ.
ಆದ್ದರಿಂದ ತಾವುಗಳು ಭಾಗವಹಿಸಿ ಅವರ ಆತ್ಮಕ್ಕೆ ಚಿರಶಾಂತಿ ಕೋರಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಬಿ ಕೆ ಶಿವರಾಂ ಮತ್ತು ಎಸ್ ಎ ಚಿನ್ನೇಗೌಡರು ಮತ್ತು ಕುಟುಂಬದವರು ಸರ್ವರಿಗೂ ಆಹ್ವಾನ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಸ್ಪಂದನಾ ಅವರು ಸ್ನೇಹಿತರ ಜೊತೆಗೆ ಬ್ಯಾಂಕಾಕ್ಕೆ ಪ್ರವಾಸಕ್ಕೆಂದು ಹೋಗಿದ್ದರು, ಆಗಸ್ಟ್ 6 ರಂದು ಹೃದಯಘಾತದಿಂದ ಅವರು ಇಹಲೋಕವನ್ನು ತ್ಯಜಿಸಿದರು.