ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕ ರಾಂಪುರ ಗ್ರಾಮ ವ್ಯಾಪ್ತಿಯಲ್ಲಿ ಇರುವಂತಹ ಅಂಜನಾದ್ರಿ ಪರ್ವತಕ್ಕೆ ರಾಮಾಯಣ ಕಾಲದ ಐತಿಹಾಸಿಕ ಹಿನ್ನೆಲೆಯಿದ್ದು, ಇದನ್ನು ಸರ್ಕಾರ ತನ್ನ ವಶಕ್ಕೆ ಪಡೆದು ಸುಮಾರು ಆರು ವರ್ಷಗಳ ಕಾಲ ಕಳೆದಿದೆ. ಈ ಆರು ವರ್ಷಗಳಲ್ಲಿ ಭಕ್ತರಿಂದ ಕಾಣಿಕೆ ರೂಪದಲ್ಲಿ ಈ ದೇಗುಲಕ್ಕೆ ಸಂದಾಯವಾಗಿರುವ ಮೊತ್ತವು 6 ಕೋಟಿ ಎನ್ನಲಾಗಿದ್ದು, ಕಾಣಿಕೆ ಸಂಗ್ರಹದಲ್ಲಿನ ಈ ಹೆಚ್ಚಳವು ದೇಗುಲದ ಅಭಿವೃದ್ಧಿಗೆ ಹೊಸ ಭರವಸೆಯನ್ನು ಮೂಡಿಸಿದೆ.
ಈ ಅಂಜನಾದ್ರಿ ಪರ್ವತವನ್ನು ರಾಮಾಯಣದಲ್ಲಿ ಕಂಡು ಬರುವ ಮಹಾ ಶಕ್ತಿವಂತ, ವಾಯುಪುತ್ರ, ಅಂಜನೀ ಸುತನಾದ ಹನುಮಂತನು ಜನಿಸಿದ ಸ್ಥಳ ಎಂದು ಕರೆಯಲಾಗುತ್ತಿದ್ದು, ಧಾರ್ಮಿಕ ಐತಿಹ್ಯವನ್ನು ಈ ಸ್ಥಳ ಪಡೆದುಕೊಂಡಿದೆ. ಹಂಪಿಯ ಸಮೀಪದಲ್ಲಿ ಇರುವ ಅಂಜನಾದ್ರಿ ಪರ್ವತಕ್ಕೆ ಸಾಕಷ್ಟು ಇತಿಹಾಸವೂ ಇರುವುದರಿಂದ ಇಲ್ಲಿಗೆ ಸ್ಥಳೀಯ ಭಕ್ತರು ಮಾತ್ರವೇ ಅಲ್ಲದೇ ದೇಶ, ವಿದೇಶಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ ಎನ್ನಲಾಗಿದೆ.
ವಾರಾಂತ್ಯದಲ್ಲಿ ಇಲ್ಲಿಗೆ ಸಹಸ್ರಾರು ಭಕ್ತರು ಭೇಟಿ ನೀಡಿ, ಆಂಜನೇಯ ಸ್ವಾಮಿಯ ದರ್ಶನವನ್ನು ಮಾಡುತ್ತಿದ್ದಾರೆ. ಉತ್ತರದಲ್ಲಿ ಇರುವ ಶ್ರೀರಾಮ ಜನ್ಮ ಭೂಮಿಯಾದ ಅಯೋಧ್ಯೆಯಷ್ಟೇ ಪಾವಿತ್ರ್ಯತೆಯನ್ನು ಹೊಂದಿರುವ ಈ ಅಂಜನಾದ್ರಿ ಪರ್ವತವನ್ನು, ಕಳೆದ 6 ವರ್ಷಗಳಿಂದ ತಾಲೂಕು ಆಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆ ನಿರ್ವಹಣೆ ಮಾಡುತ್ತಿದ್ದು, ಇಲ್ಲಿಗೆ ಬರುವ ಭಕ್ತರಿಗೆ ಅಗತ್ಯವಾದ ಸೌಕರ್ಯಗಳನ್ನು ಕಲ್ಪಿಸಲು ಮತ್ತು ದೇವಾಲಯುದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ.