ಆದಿಪುರುಷ ಸಿನಿಮಾ ಸೃಷ್ಟಿಸಿದ ವಿವಾದ ಅಷ್ಟಿಷ್ಟಲ್ಲ, ಭಾರೀ ನಿರೀಕ್ಷೆಗಳ ನಡುವೆ ತೆರೆ ಕಂಡ ಸಿನಿಮಾ, ತೆರೆಗೆ ಬಂದ ಮೇಲೆ ಬಹಳಷ್ಟು ಜನರು ಹಾಗೂ ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಯಿತು. ವಿವಾದ ಕೋರ್ಟ್ ಮೆಟ್ಟಿಲೇರಿತು. ಕೋರ್ಟ್ ಸಹಾ ಆದಿಪುರುಷ ಸಿನಿಮಾಕ್ಕೆ ಛೀಮಾರಿ ಹಾಕಿದ್ದೂ ಆಯಿತು. ಆದಿಪುರುಷ ಸಿನಿಮಾದಲ್ಲಿ ಮೂಲ ರಾಮಾಯಣವನ್ನು ತಿರುಚಲಾಗಿದೆ, ಪಾತ್ರಗಳ ಚಿತ್ರಣವನ್ನು ಹಾಳು ಮಾಡಲಾಗಿದೆ, ಟಪೋರಿ ಡೈಲಾಗ್ ಗಳನ್ನು ಹೇಳಿಸಲಾಗಿದೆ ಎಂದು ಜನರು ಸಿನಿಮಾ ವಿರುದ್ಧ ತಿರುಗಿ ಬಿದ್ದರು.
ಹೀಗೆ ಆದಿಪುರುಷ ಸಿನಿಮಾದ ಬಗ್ಗೆ ಅಸಮಾಧಾನದ ಅಲೆ ಎದ್ದಿರುವಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಎಂಬತ್ತರ ದಶಕದಲ್ಲಿ ಟಿವಿಯಲ್ಲಿ ಪ್ರಸಾರ ಕಂಡು ದಾಖಲೆ ಬರೆದು, ಜನರ ಆದರ, ಅಭಿಮಾನ ಪಡೆದ ರಾಮಾಯಣ ಸೀರಿಯಲ್ ನ ಫೋಟೋಗಳು ಮತ್ತು ವೀಡಿಯೋ ಗಳನ್ನು ಹಂಚಿಕೊಂಡು ಆದಿಪುರುಷ ಸಿನಿಮಾಕ್ಕಿಂತ ನೂರು ಪಟ್ಟು ಚೆನ್ನಾಗಿದೆ ಎಂದು ಹೇಳಲು ಆರಂಭಿಸಿದ್ದರು.
ರಾಮಾಯಣ ಸೀರಿಯಲ್ ಬಂದು ದಶಕಗಳೇ ಆದರೂ, ಕೊರೊನಾ ಕಾಲದಲ್ಲಿ ಮರುಪ್ರಸಾರ ಕಂಡಾಗಲೂ ಮತ್ತೊಮ್ಮೆ ಈ ಸೀರಿಯಲ್ ದಾಖಲೆಯನ್ನು ಬರೆದಿತ್ತು. ಈಗ ಮತ್ತೊಮ್ಮೆ ರಾಮಾಯಣ ಸೀರಿಯಲ್ ಟಿವಿ ಮತ್ತು ಓಟಿಟಿ ಎರಡರಲ್ಲೂ ಮರುಪ್ರಸಾರ ಕಾಣಲಿದ್ದು ಶೆಮಾರು ಈ ಹೊಸ ಅಪ್ಡೇಟ್ ಅನ್ನು ನೀಡಿದೆ. ಜುಲೈ 3 ರಿಂದ ಶೆಮಾರು ಟಿವಿಯಲ್ಲಿ ರಾತ್ರಿ 7:30 ಕ್ಕೆ ರಾಮಾಯಣ ಪ್ರಸಾರ ಆಗಲಿದೆ. ಇದು ಓಟಿಟಿ ಮತ್ತು ಟಿವಿ ಚಾನೆಲ್ ಗಳಲ್ಲೂ ಪ್ರಸಾರ ಆಗಲಿದೆ.