ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡುವವರ ಸಂಖ್ಯೆ ಕೊಂಚಮಟ್ಟಿಗೆ ಕಮ್ಮಿ ಆಗುತ್ತಿದೆ ಎನ್ನಬಹುದು. ಥಿಯೇಟರ್ ಸಮಸ್ಯೆ ಚಿತ್ರಮಂದಿರಗಳಿಗೆ ಜನ ಬರುತ್ತಿಲ್ಲ ಎಂಬ ಹಲವಾರು ಕಾರಣಗಳು ಹೊಸ ನಿರ್ಮಾಪಕರಿಗೆ ಸಿನಿಮಾಗಳ ಬಗ್ಗೆ ಆಸಕ್ತಿ ಇಲ್ಲದಂತೆ ಮಾಡಿದೆ. ಆದರೆ ಸಿನಿಮಾಗಳನ್ನು ಗುಣಮಟ್ಟದಿಂದ ನಿರ್ಮಿಸಿ ಜನರನ್ನು ಚಿತ್ರಮಂದಿರದತ್ತ ಕರೆತರುವ ಚಾಕಚಕ್ಯತೆ ಎಲ್ಲಾ ನಿರ್ಮಾಪಕರಿಗೆ ಇರುವುದಿಲ್ಲ. ಕನ್ನಡ ಚಿತ್ರರಂಗದ ಈಗಿನ ನಿರ್ಮಾಪಕರ ಪೈಕಿ ಕನ್ನಡ ಚಿತ್ರವನ್ನು ಅತಿಯಾಗಿ ಪ್ರೀತಿಸುವ ನಿರ್ಮಾಪಕರು ಯಾರೆಂದು ಯಾರನ್ನಾದರೂ ಗಾಂಧಿನಗರದಲ್ಲಿ ಕೇಳಿದರೆ ಮೊದಲು ಅವರು ಹೇಳುವ ಹೆಸರೇ ಕೆ.ಪಿ ಶ್ರೀಕಾಂತ್.
ಹೌದು ಕೆ.ಪಿ ಶ್ರೀಕಾಂತ್ ಎಂದರೆ ಒಬ್ಬ ಪ್ರಬುದ್ಧ ಹಾಗೂ ಕನ್ನಡ ಚಿತ್ರರಂಗದ ಪ್ರತಿಯೊಂದು ಆಗು ಹೋಗುಗಳನ್ನು, ಅಳತೆಯನ್ನು ಸಂಪೂರ್ಣವಾಗಿ ತಿಳಿದುಕೊಂಡಿರುವ ಸನ್ನಡತೆಯ ವ್ಯಕ್ತಿ. ಟಗರು ಚಿತ್ರದ ಮೂಲಕ ಸ್ವತಂತ್ರ ನಿರ್ಮಾಪಕರಾಗಿ ನಿರ್ಮಾಣವನ್ನು ಆರಂಭಿಸಿದ K.P ಶ್ರೀಕಾಂತ್ ಅವರು ಟಗರು,ಸಲಗ ಚಿತ್ರದ ಮೂಲಕ ಭರ್ಜರಿ ಯಶಸ್ಸು ಪಡೆದರು. ಇದೀಗ ಕೆ.ಪಿ ಶ್ರೀಕಾಂತ್ ಅವರು ಲಹರಿ ಸಂಸ್ಥೆಯ ಮೂಲಕ ಕೈಜೋಡಿಸಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿ, ನಿರ್ದೇಶಿಸುತ್ತಿರುವ UI ಚಿತ್ರ ನಿರ್ಮಾಣ ಮಾಡುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ UI ತೆರೆ ಮೇಲೆ ಅಪ್ಪಳಿಸಲಿದೆ.
ಇದರ ಜೊತೆಯಲ್ಲಿ ಕನ್ನಡ ಚಿತ್ರರಂಗದ ದೊಡ್ಮನೆಯ ಯುವ ನಟ ವಿನಯ್ ರಾಜಕುಮಾರ್ ಅಭಿನಯಿಸುತ್ತಿರುವ “ಗ್ರಾಮಾಯಣ” ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಕೆಪಿ ಶ್ರೀಕಾಂತ್ , ಇದರ ಜೊತೆಗೆ ಕಿಚ್ಚ ಸುದೀಪ್ ಅವರ ಅಕ್ಕನ ಮಗನಾದ ಸಂಚಿತ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ಹೊಣೆಯನ್ನು ಹೊತ್ತು “ಜಿಮ್ಮಿ” ಚಿತ್ರ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ.ಜೊತೆಗೆ ನಿಖಿಲ್ ಕುಮಾರಸ್ವಾಮಿ ಅಭಿನಯದ ಚಿತ್ರವನ್ನು KP ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದು ಕನ್ನಡ ಚಿತ್ರರಂಗದಲ್ಲಿ ಒಂದೇ ಬಾರಿಗೆ ನಾಲ್ಕೂ ಪ್ರಮುಖ ಸಿನಿಮಾಗಳ ನಿರ್ಮಾಣದ ಹೊಣೆ ಹೊತ್ತಿರುವ ಕೆ.ಪಿ ಶ್ರೀಕಾಂತ್ ಅವರು ಸಿನಿಮಾವನ್ನು ಪ್ರೀತಿಸುವ ಶೈಲಿ ಮತ್ತು ಸಿನಿಮಾವನ್ನು ಜನರಿಗೆ ತಲುಪಿಸುವ
ರೀತಿಯನ್ನು ಚೆನ್ನಾಗಿ ಅರಿತಿದ್ದಾರೆ.ಇನ್ನು ಕೆಪಿ ಶ್ರೀಕಾಂತ್ ಅವರ ಬೆನ್ನಿಗೆ ದೊಡ್ಮನೆಯ ದೊಡ್ಡ ದೊರೆ ಡಾ. ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಕಿಚ್ಚ ಸುದೀಪ್,ದುನಿಯಾ ವಿಜಯ್ ಸೇರಿ ಚಿತ್ರರಂಗದ ಹಲವಾರು ಘಟಾನುಘಟಿ ನಟರು ನಿಂತಿದ್ದಾರೆ. ಇನ್ನು ಕೆಪಿ ಶ್ರೀಕಾಂತ್ ಅವರಿಗೆ ಸಹಾಯವಾಗಿ ಕೆಪಿ ಶ್ರೀಕಾಂತ್ ಅವರ ಜೊತೆಯಾಗಿ ಹಲವು ವರ್ಷಗಳಿಂದ ನಾಗಿ ಹಾಗೂ ಪುನೀತ್ ಜೊತೆಯಾಗಿದ್ದಾರೆ. ಸಿನಿಮಾಗಳನ್ನು ನಿರ್ಮಿಸಲು ಹಿಂದೇಟು ಹಾಕುವ ಜನರ ನಡುವೆ ಸಿನಿಮಾಗಳನ್ನು ಹೀಗೂ ನಿರ್ಮಾಣ ಮಾಡಬಹುದು ಎಂದು ಈಗಿನ ನಿರ್ಮಾಪಕರಿಗೆ ಶ್ರೀಕಾಂತ್ ಆದರ್ಶವಾಗಿದ್ದಾರೆ ಎನ್ನಬಹುದು.