ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರೊಂದಿಗೆ ಮಹೇಶ್ ಬಾಬು (Mahesh Babu) ನಾಯಕನಾಗಿರುವ ಗುಂಟೂರು ಖಾರಂ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿಯಾಗಿ ಸಿನಿಮಾ ಒಪ್ಪಿಕೊಂಡಿದ್ದರು. ನಂತರ ಸಿನಿಮಾ ಸಹಾ ಬಹಳ ಸಂಭ್ರಮದಿಂದ ಪ್ರಾರಂಭವಾಯಿತು. ಆದರೂ ಈಗ ನಟಿ ಪೂಜಾ ಹೆಗ್ಡೆ ಈ ಸಿನಿಮಾದಿಂದ ಹೊರ ನಡೆದಿರುವುದು ಅಧಿಕೃತವಾಗಿದೆ. ಅಲ್ಲದೇ ಈಗ ನಟಿ ಪೂಜಾ ಹೆಗ್ಡೆ ಹೊರ ನಡೆದ ಹಿನ್ನೆಲೆಯಲ್ಲಿ ಬೇರೊಬ್ಬ ನಟಿ ಎಂಟ್ರಿ ನೀಡಿದ್ದಾರೆ. ಹಾಗಾದರೆ ಆ ಹೊಸ ನಟಿ ಯಾರು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಪೂಜಾ ಹೆಗ್ಡೆ (Pooja Hegde) ಗುಂಟೂರು ಖಾರಂ ಸಿನಿಮಾಕ್ಕಾಗಿ ಈಗಾಗಲೇ 10 ದಿನಗಳ ಕಾಲ ಚಿತ್ರೀಕರಣ ಸಹಾ ನಡೆಸಿದ್ದರೆಂದು ಮೂಲಗಳು ತಿಳಿಸಿದೆ. ಆದರೆ ಪೂಜಾ ಹೆಗ್ಡೆ ಸಿನಿಮಾದಿಂದ ಹೊರ ಬಂದ ಕಾರಣ ಈಗ ಮತ್ತೊಮ್ಮೆ ಆ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಹೌದು, ಗುಂಟೂರು ಖಾರಂ ಗೆ ಈಗ ನಟಿ ಮೀನಾಕ್ಷಿ ಚೌಧರಿ ಎಂಟ್ರಿ ನೀಡಿದ್ದಾರೆ. ನಟಿ ಪೂಜಾ ಹೆಗ್ಡೆ ಈ ಸಿನಿಮಾಕ್ಕಾಗಿ 40 ದಿನಗಳ ಡೇಟ್ಸ್ ನೀಡಿದ್ದರು ಎನ್ನಲಾಗಿದೆ.
ಆದರೆ ಸಿನಿಮಾದ ಚಿತ್ರೀಕರಣದ ಶೆಡ್ಯೂಲ್ ಪದೇ ಪದೇ ಬದಲಾಗುತ್ತಿದ್ದ ಕಾರಣ, ನಟಿ ತಾವು ಡೇಟ್ ಕೊಟ್ಟ ಬೇರೆ ಸಿನಿಮಾಗಳ ಕೆಲಸಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಗುಂಟೂರು ಖಾರಂ ಸಿನಿಮಾದಿಂದ ಹೊರ ನಡೆದಿದ್ದಾರೆ. ಈಗ ಮಹೇಶ್ ಬಾಬು ಜೊತೆಗೆ ನಟಿಸುವ ಅವಕಾಶ ನವ ನಟಿ ಮೀನಾಕ್ಷಿ ಚೌಧರಿ ಅವರಿಗೆ ಸಿಕ್ಕಿದೆ. ಮೀನಾಕ್ಷಿ ಚೌಧರಿ ಅವರು 2021 ರಲ್ಲಿ ತೆಲುಗಿನ ಇಚಟ ವಾಹನಮುಲು ನಿಲುಪರಾದು ಸಿನಿಮಾ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟರು.
ಗುಂಟೂರು ಖಾರಂ ಮೀನಾಕ್ಷಿ ಅವರಿಗೆ ಸಿಕ್ಕಿರುವ ಮೊದಲ ದೊಡ್ಡ ಸಿನಿಮಾ ಆಗಿದೆ. ಇನ್ನು ಈ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿದ್ದ ನಟಿ ಶ್ರೀಲೀಲಾ ಈಗ ಮೊದಲ ನಾಯಕಿಯಾಗಲಿದ್ದಾರೆ ಎನ್ನಲಾಗಿದ್ದು, ಶ್ರೀ ಲೀಲಾ ನಿರ್ವಹಿಸುತ್ತಿದ್ದ ಪಾತ್ರದಲ್ಲಿ ಮೀನಾಕ್ಷಿ ಚೌಧರಿ (Meenakshi Chaudhary) ನಟಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಸಹಾ ಹರಿದಾಡಿದ್ದು, ಶ್ರೀಲೀಲಾ ಅದೃಷ್ಟ ಕಂಡ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.