ತನ್ನ ಪಬ್ಜಿ ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿರುವ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ವಿಷಯವಾಗಿ ಸಾಕಷ್ಟು ಸುದ್ದಿಗಳು ಹೊರ ಬರುತ್ತಲೇ ಇದೆ. ಈಗ ಸೀಮಾ ಹೈದರ್ ವಿಚಾರವು ರಾಷ್ಟ್ರಪತಿ ಭವನ ವನ್ನು ಸಹಾ ತಲುಪಿದೆ. ಸೀನಾ ಹೈದರ್ ತಾನು ಭಾರತದಲ್ಲೇ ಉಳಿಯಲು ಅವಕಾಶ ನೀಡುವಂತೆ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕ್ಷಮಾದಾನದ ಅರ್ಜಿಯನ್ನು ಸಲ್ಲಿಸಿದ್ದಾರೆ.
ಸೀಮಾ ಹೈದರ್ ತನಗೆ ಹಿಂದೆಂದೂ ಕಾಣದಂತಹ ಪ್ರೀತಿಯನ್ನು ತನ್ನ ಪತಿ ಸಚಿನ್ ಮೀನಾ ನೀಡಿದ್ದು, ಅವರ ತಂದೆ ತಾಯಿ ಸಹಾ ತನ್ನನ್ನು ಪ್ರೀತಿಯಿಂದ ನೋಡಿದ್ದಾರೆ. ನನಗೆ ನನ್ನ ನಾಲ್ಕು ಜನ ಮಕ್ಕಳ ಜೊತೆಗೆ ಭಾರತದಲ್ಲೇ ಉಳಿದುಕೊಳ್ಳುವ ಅವಕಾಶವನ್ನು ನೀಡಿ ಎಂದು ಮನವಿ ಮಾಡಿರುವ ಸೀಮಾ ಹೈದರ್ ತನಗೆ ರಾಷ್ಟ್ರಪತಿ ಅವರಿಂದ ಮೌಖಿಕ ವಿಚಾರಣೆ ಆಗಬೇಕೆಂಬ ಒತ್ತಾಯವನ್ನು ಸಹಾ ಮಾಡಿದ್ದಾರೆ.
ಇದೇ ವೇಳೆ ಸೀಮಾ ಹೈದರ್ ಅವರ ಪರ ವಕೀಲ ಎ.ಪಿ ಸಿಂಗ್ ಸಲ್ಲಿಸಿರುವ ಸುಮಾರು 38 ಪುಟಗಳ ಅರ್ಜಿಯಲ್ಲಿ, ಅವರು ಹಲವು ಬಾಲಿವುಡ್ ನಟ-ನಟಿಯರನ್ನ ಉದಾಹರಣೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಈಕೆ ಇಸ್ಲಾಂ ತೊರೆದಿದ್ದು ನೇಪಾದಳ ಕಠ್ಮಂಡುವಿನ ಪಶು ಪತಿ ನಾಥ ದೇವಾಲಯದಲ್ಲಿ ಸಚಿನ್ ಮೀನಾ ಜೊತೆಗೆ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದಾರೆ, ಆಕೆ ಹಿಂದೂ ಧರ್ಮ ಸ್ವೀಕರಿಸಿದ್ದಾರೆಂದು ಅರ್ಜಿಯಲ್ಲಿ ತಿಳಿಸಲಾಗಿದೆ.