ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸದ ಘಟನೆಯ ಬಗ್ಗೆ ದೇಶದಾದ್ಯಂತ ಅಸಮಾಧಾನ, ಆಕ್ರೋಶ ವ್ಯಕ್ತವಾಗಿದೆ. ಅಂತಹ ನೀಚ ಕೃತ್ಯ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಜನರು ಆಗ್ರಹಿಸಿದ್ದಾರೆ. ಆ ಘಟನೆಯಿಂದಾಗಿ ಇಡೀ ದೇಶ ತಲೆ ತಗ್ಗಿಸುವಂತಾಗಿದೆ ಎಂದು ಸೋಶಿಯಲ್ ಮೀಡಿಯಾಗಳ ಮೂಲಕ ಜನರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈಗ ಇವೆಲ್ಲವುಗಳ ನಡುವೆ ಮತ್ತೊಂದು ಬೇಸರದ ಸುದ್ದಿ ಹೊರ ಬಂದಿದೆ.
ಕ್ರೌರ್ಯಕ್ಕೆ ಗುರಿಯಾದ ಇಬ್ಬರು ಮಹಿಳೆಯರಲ್ಲಿ ಒಬ್ಬ ಮಹಿಳೆಯ ಪತಿ ಮಾಜಿ ಯೋಧ ಎನ್ನಲಾಗಿದ್ದು, ಅವರು ತಾನು ಕಾರ್ಗಿಲ್ ಯುದ್ಧದಲ್ಲಿ ರಾಷ್ಟ್ರಕ್ಕಾಗಿ ಹೋರಾಡಿದ್ದೇನೆ ಮತ್ತು ಭಾರತೀಯ ಶಾಂತಿಪಾಲನಾ ಪಡೆಯ ಭಾಗವಾಗಿ ಶ್ರೀಲಂಕಾದಲ್ಲಿಯೂ ಇದ್ದೆ ಎಂದು ಹೇಳಿಕೊಂಡಿದ್ದು, ದುಃಖಕರವೆಂದರೆ, ತನ್ನ ಹೆಂಡತಿಯನ್ನು ಅವಮಾನದಿಂದ ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಆ ಯೋಧ ಮಾತನಾಡುತ್ತಾ, ನಾನು ಯೋಧನಾಗಿ ದೇಶವನ್ನು ರಕ್ಷಿಸಿದ್ದೇನೆ. ಆದರೆ ನನ್ನ ನಿವೃತ್ತಿಯ ನಂತರ ನನ್ನ ಮನೆ, ನನ್ನ ಹೆಂಡತಿ ಮತ್ತು ಗ್ರಾಮಸ್ಥರನ್ನು ರಕ್ಷಿಸಲು ನನಗೆ ಸಾಧ್ಯವಾಗಲಿಲ್ಲ ಎಂದು ಬೇಸರಗೊಂಡಿದ್ದೇನೆ ಮತ್ತು ದುಃಖಿತನಾಗಿದ್ದೇನೆ, ಖಿನ್ನತೆಗೆ ಒಳಗಾಗಿದ್ದೇನೆ ಎಂದು ಅಸ್ಸಾಂ ರೆಜಿಮೆಂಟ್‌ನ ಸುಬೇದಾರ್ ಆಗಿ ಭಾರತೀಯ ಸೇನೆಗೆ ಸೇವೆ ಸಲ್ಲಿಸಿದ ನಿವೃತ್ತ ಯೋಧ ಹೇಳಿದ್ದಾರೆ.