ಕೃತಿಚೌರ್ಯ ಉಲ್ಲಂಘನೆ ಪ್ರಕರಣದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ನ ನಾಯಕರದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರೀನೇಟ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ಈ ಮೊಕದ್ದಮೆಯನ್ನು ರದ್ದುಗೊಳಿಸಬೇಕೆಂದು ಸಲ್ಲಿಸಲಾಗಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗಾಗಿ ಸೂಪರ್ ಹಿಟ್ ಸಿನಿಮಾ ಕೆಜಿಎಫ್ ನ ಸಂಗೀತವನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಈ ವಿಚಾರವಾಗಿ ಕೃತಿಚೌರ್ಯ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು.
ಇದನ್ನು ರದ್ದು ಮಾಡುವಂತೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ತನಿಖೆಗೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ನ ಏಕ ಸದಸ್ಯ ಪೀಠದಿಂದ ಈ ಆದೇಶ ಹೊರ ಬಂದಿದೆ. ಯಾವುದೇ ರೀತಿಯ ಅನುಮತಿಯನ್ನು ಪಡೆಯದೆ ಸಂಗೀತವನ್ನು ಬಳಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಇದು ದೂರುದಾರರ ಹಕ್ಕು ಸ್ವಾಮ್ಯವನ್ನು ಉಲ್ಲಂಘಿಸುತ್ತದೆ ಎಂದು ಕೋರ್ಟ್ ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ, ಎಐಸಿಸಿ ಜನರಲ್ ಸೆಕ್ರೆಟರಿ ಜೈರಾಮ್ ರಮೇಶ್ ಮತ್ತು ಎಐಸಿಸಿ ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ಕಾಂಗ್ರೆಸ್ ನಾಯಕರ ಪರವಾಗಿ ವಾದವನ್ನು ಮಂಡಿಸಿದ ಹಿರಿಯ ವಕೀಲ ವಿಕ್ರಮ್ ಹುಯಿಲ್ಗೋಳ್, ಹಕ್ಕು ಸ್ವಾಮ್ಯ ಕಾಯ್ದೆಯ ಸೆಕ್ಷನ್ 63 ರ ಅಡಿಯಲ್ಲಿ ಅಪರಾಧ ಮಾಡಬೇಕಾದರೆ, ಆರೋಪಿಯು ಉದ್ದೇಶಪೂರ್ವಕವಾಗಿ ಇದನ್ನು ಮಾಡಿಲ್ಲ.
ಅಲ್ಲದೇ ಸಂಗೀತವನ್ನು ಬಳಸಿಕೊಂಡು ಅವರು ಯಾವುದೇ ರೀತಿಯ ಹಣವನ್ನು ಗಳಿಸಿಲ್ಲ ಎಂದು ತಮ್ಮ ವಾದವನ್ನು ಮಂಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪಾದ ಮಂಡಿಸಿದ ಎಂಆರ್‌ಟಿ ಸಂಸ್ಥೆಯ ಪರ ಹಿರಿಯ ವಕೀಲ ಎಸ್ ಶ್ರೀರಂಗ ಅವರು ಯಾವುದೇ ಹಣದ ಲಾಭವನ್ನು ಮಾಡದೇ ಇರಬಹುದು ಎಂದು ಭಾವಿಸಲಾಗಿದ್ದರೂ, ಗಳಿಕೆ ಕೇವಲ ಹಣವೇ ? ಎಂದು ಪ್ರಶ್ನೆ ಮಾಡುತ್ತಾ, ಅವರು ಈ ಸಂಗೀತವನ್ನು ಬಳಸಿಕೊಂಡು ಜನಪ್ರಿಯತೆ ಪಡೆದುಕೊಂಡಿದ್ದಾರೆ ಎಂದು ವಾದವನ್ನು ಮಂಡಿಸುದ್ದಾರೆ.
ಕೆಜಿಎಫ್ ಸಿನಿಮಾದ ಸಂಗೀತವನ್ನು ಬಳಸಿಕೊಂಡಿದ್ದಾರೆ ಎಂದು ಎಂಆರ್‌ಪಿ ಮ್ಯೂಸಿಕ್ ಸಂಸ್ಥೆ ದೂರನ್ನು ದಾಖಲು ಮಾಡಿದ್ದು,
ಎಂ ಆರ್ ಪಿ ಮ್ಯೂಸಿಕ್ ಸಂಸ್ಥೆಯ ಮಾಲಿಕ ನವೀನ್ ಕುಮಾರ್ ಅವರು ಅನುಮತಿಯನ್ನು ಪಡೆಯದೆ ಕೆಜಿಎಫ್ 2 ಚಿತ್ರದ ಹಾಡಿನ ಸಂಗೀತವನ್ನು ಬಳಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ದೂರನ್ನು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಯಶವಂತಪುರ ಠಾಣೆಯಲ್ಲಿ ಐಪಿಸಿ, ಕಾಪಿರೈಟ್ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ 2022ರ ಡಿಸೆಂಬರ್ 8ರಂದು ಎಫ್ಐಆರ್ ದಾಖಲಾಗಿತ್ತು. ಈ ಎಫ್ ಐ ಆರ್ ರದ್ದು ಕೋರಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲು ಏರಿದ್ದರು. ಆದರೆ ಈಗ ಅರ್ಜಿ ವಜಾ ಆಗಿದ್ದು ರಾಜಕೀಯ ನಾಯಕರಿಗೆ ಹಿನ್ನಡೆ ಉಂಟಾಗಿದೆ.