ಕರ್ನಾಟಕ ಸರ್ಕಾರ ಸಿನಿಮಾಗಳಿಗೆ ನೀಡುತ್ತಿದ್ದ ಸಹಾಯಧನವನ್ನು ಕಳೆದ ಮೂರು ವರ್ಷಗಳಿಂದಲೂ ಸಹಾ ನೀಡಿರಲಿಲ್ಲ. ಬೇರೆ ಬೇರೆ ಕಾರಣಗಳನ್ನು ಕೊಡುತ್ತಾ ಸಿನಿಮಾಗಳಿಗೆ ನೀಡಲಾಗುವ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ರಾಜ್ಯದಲ್ಲಿನ ಹೊಸ ಸರ್ಕಾರವು ಮತ್ತೆ ಸಿನಿಮಾಗಳಿಗೆ ಸಹಾಯಧನವನ್ನು ನೀಡಲು ಕ್ರಮ ಕೈಗೊಳ್ಳುವುದಾಗಿ ನಿರ್ಧಾರ ಮಾಡಿದ್ದು, ಈ ವಿಷಯವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತಮ್ಮ ಬಜೆಟ್ ನಲ್ಲಿ ತಿಳಿಸುವ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಒಂದು ಸಂತೋಷದ ಸುದ್ದಿಯನ್ನು ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕನ್ನಡದ ಗುಣಾತ್ಮಕ ಸಿನಿಮಾಗಳಿಗೆ ಸಹಾಯಧನವನ್ನು ನೀಡುವ ಯೋಜನೆ ಸ್ಥಗಿತವಾಗಿತ್ತು. ಈ ಬಾರಿ ಆಯ್ಕೆ ಸಮಿತಿಗಳನ್ನು ರಚಿಸಿ ಸಹಾಯಧನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬಜೆಟ್ ಘೋಷಣೆ ಮಾಡಿದ್ದಾರೆ. ಈ ಮೂಲಕ ಮುಖ್ಯಮಂತ್ರಿಗಳು ಗುಣಾತ್ಮಕ ಕನ್ನಡ ಸಿನಿಮಾಗಳ ನಿರ್ಮಾಪಕರ ನೆರವಿಗೆ ಧಾವಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಸಿನಿಮಾ ಸಬ್ಸಿಡಿ ಮತ್ತು ಸಿನಿಮಾ ಪ್ರಶಸ್ತಿಗೆ ಸಂಬಂಧಪಟ್ಟಂತೆ ನಿಯೋಗವೊಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತ್ತು.
2018 ರಿಂದ ಸಿನಿಮಾ ಪ್ರಶಸ್ತಿಯನ್ನು ನೀಡಿಲ್ಲ ಮತ್ತು ಸಬ್ಸಿಡಿಯನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಮುಂದೆ ಮನವಿಯನ್ನು ಮಾಡಿಕೊಂಡಿದ್ದರು. ನಿಯೋಗದ ಮನವಿಯನ್ನು ಸ್ವೀಕರಿಸಿ, ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿ ಬಜೆಟ್ ನಲ್ಲಿ ಸಬ್ಸಿಡಿಯ ಕುರಿತಾಗಿ ಉಲ್ಲೇಖ ಮಾಡಿದ್ದಾರೆ. ಆದರೆ ಪ್ರಶಸ್ತಿಯ ಮನವಿಯನ್ನು ಅವರು ಪುರಸ್ಕರಿಸಿಲ್ಲ.