ಕನ್ನಡ ಸೇರಿದಂತೆ ದಕ್ಷಿಣ ಭಾರತದ ಇತರೆ ಭಾಷೆಯ ಸಿನಿಮಾಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿರುವ ನಟ ಕಿಶೋರ್ ಅವರು ಕಾಂತಾರ ಸಿನಿಮಾದ ನಂತರ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಸಕ್ರಿಯರಾಗಿದ್ದು, ಆಗಾಗ ಪ್ರಸ್ತುತ ವಿದ್ಯಮಾನಗಳ ಕುರಿತಾಗಿ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡು ಒಂದಷ್ಟು ಚರ್ಚೆಗಳಿಗೆ ಕಾರಣವಾಗುತ್ತಾರೆ. ನಟನ ಮಾತಿಗೆ ಪರ, ವಿರೋಧ ಅಭಿಪ್ರಾಯಗಳು ಸಹಾ ಹರಿದು ಬರುತ್ತದೆ.
ಈಗ ನಟ ಕಿಶೋರ್ ಅವರ ಪೋಸ್ಟ್ ಒಂದು ಜನರ ಗಮನ ಸೆಳೆದಿದೆ. ಇದು ಸುದ್ದಿಯಾಗಿದೆ. ತಮ್ಮ ಹೊಸ ಪೋಸ್ಟ್ ನಲ್ಲಿ ಕಿಶೋರ್ ಅವರು ಪ್ರಧಾನಿ ಮೋದಿಯವರ ಮೌನವನ್ನು ಪ್ರಶ್ನೆ ಮಾಡಿದ್ದಾರೆ. ಮೋದಿಯವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಣಿಪುರದಲ್ಲಿನ ಹಿಂಸಾಚಾರ ಕುರಿತಂತೆ ಮಾತನಾಡದೇ ಮೌನವಾಗಿ ಇದ್ದುದ್ದನ್ನು ಕಿಶೋರ್ ಪ್ರಶ್ನೆ ಮಾಡಿದ್ದಾರೆ.
ಮನ್ ಕಿ ಬಾತ್ ನಲ್ಲಿ ಕಳೆದು ಹೋದ ಮಣಿಪುರ್ ಕಿ ಬಾತ್ ಎಂದು ಬರೆಯುತ್ತಾ, ಕಿಶೋರ್ ಅವರು ದೇಶದಲ್ಲಿ ಎಲ್ಲೇ ಅಶಾಂತಿ ಮೂಡಿದಾಗಲೂ ಒಬ್ಬ ಪ್ರಧಾನಿ ಮಾಡಬಹುದಾದ ಮೂಲಭೂತ, ಅತೀ ಸರಳ, ಕಾಮನ್ ಸೆನ್ಸ್ ನ ಕೆಲಸ ಶಾಂತಿಯ ಕರೆ ಕೊಡುವುದು. ಅದನ್ನೂ ಕೂಡಾ ಮಾಡದ ಪ್ರಧಾನಿಯ ಮನಸ್ಥಿತಿಯೇನು? ಎಂದು ಪ್ರಧಾನಿ ನಡೆಯ ಬಗ್ಗೆ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಹಾಗೆ ಮುಂದಿನ ಸಾಲುಗಳಲ್ಲಿ, ನೂರ ನಲವತ್ತು ಕೋಟಿ ಓಟಿನ ದೇಶದಲ್ಲಿ ಕೇವಲ 2 ಲೋಕಸಭೆ ಸೀಟಿನ ಮಣಿಪುರದ ಸತ್ತುಹೋದ ನೂರು ಓಟು, ಮನೆ ಕಳೆದುಕೊಂಡ 50 ಸಾವಿರ ಓಟುಗಳು, ಈ ಪ್ರಚಾರದಾಹಿ ಅಧಿಕಾರದಾಹಿ ಪ್ರಧಾನಿಗೆ ಯಾವ ಲೆಕ್ಕವೆಂಬುದೇ? 2002 ರಲ್ಲಿ ಗುಜರಾತ್, 2023 ರಲ್ಲಿ ಮಣಿಪುರ, ಜೀವಗಳು ಮುಖ್ಯವಲ್ಲ, ಓಟುಗಳಷ್ಟೇ ಮುಖ್ಯ, ಇತಿಹಾಸಕ್ಕೆ ಮರೆವಿಲ್ಲ ನೆನಪಿರಲಿ ಎಂದು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.