ಏಕದಿನ ವಿಶ್ವಕಪ್ ಗೂ ಮೊದಲು ಜಸ್ಪ್ರೀತ್ ಬುಮ್ರಾ ಕಣಕ್ಕಿಳಿಯಲು ಸಿದ್ಧರಾಗಿರಬೇಕೆನ್ನುವ ಕಾರಣದಿಂದ ಆತುರವಾಗಿ ಅವರನ್ನು ಆಡಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಎಂಬುದಾಗಿ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಅವರು ಎಚ್ಚರಿಕೆಯನ್ನು ನೀಡಿದ್ದಾರೆ. ಟೀಂ ಇಂಡಿಯಾದ ವೇಗದ ಬೌಲರ್ ಎನಿಸಿಕೊಂಡಿರುವ ಜಸ್ಪ್ರೀತ ಬೂಮ್ರಾ ಕಳೆದ ವರ್ಷ ಸೆಪ್ಟೆಂಬರ್ ತಿಂಗಳ ನಂತರದಲ್ಲಿ ಗಾಯದ ಸಮಸ್ಯೆಯ ಕಾರಣದಿಂದಾಗಿ ಕ್ರಿಕೆಟ್ ನಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ.
ಇದರಿಂದಾಗಿ ಅವರು 2022 ರ T20 ಏಷ್ಯಾಕಪ್, T20 ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು. ಈಗ ಈ ವರ್ಷಾಂತ್ಯದಲ್ಲಿ ಭಾರತದಲ್ಲೇ ಏಕದಿನ ವಿಶ್ವಕಪ್ ನಡೆಯಲಿದ್ದು ಈ ವೇಳೆ ಬಿಸಿಸಿಐ ಬುಮ್ರಾ ಅವರನ್ನು ಕಣಕ್ಕೆ ಇಳಿಸಲು ಬೇಕಾದ ತಯಾರಿಯನ್ನು ನಡೆಸುತ್ತಿದೆ ಎನ್ನಲಾಗಿದ್ದು, ಇದಕ್ಕೆ ರವಿಶಾಸ್ತ್ರಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಬಿಸಿಸಿಐ ಬುಮ್ರಾ ಈಗ ಬಹುತೇಕ ಫಿಟ್ ಆಗಿದ್ದಾರೆ ಮತ್ತು ಅವರು ವಿಶ್ವಕಪ್ ಗೂ ಮುನ್ನ ಐರ್ಲೆಂಡ್ ವಿರುದ್ಧದ ಸರಣಿ ಮೂಲಕ ತಂಡಕ್ಕೆ ಮರಳುವಂತೆ ಮಾಡುವ ಪ್ರಯತ್ನದಲ್ಲಿದ್ದು, ಇಂತಹುದೊಂದು ಬೆಳವಣಿಗೆಯನ್ನು ಕಂಡು ಇದರ ಬಗ್ಗೆ ರವಿ ಶಾಸ್ತ್ರಿ ಟೀಂ ಇಂಡಿಯಾಗೆ ತಮ್ಮ ಕಡೆಯಿಂದ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ರವಿಶಾಸ್ತ್ರಿ ಅವರು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಏಕದಿನ ವಿಶ್ವಕಪ್ ಗೆ ಮೊದಲೇ ಬುಮ್ರಾ ಅವರನ್ನು ಆಡಿಸುವಂತಹ ಒಂದು ಆತುರದ ನಿರ್ಧಾರ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.