ಸ್ವೀಡನ್ ದೇಶದ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿ ನಡೆದ ಘಟನೆ ವಿಶ್ವವ್ಯಾಪಿ ಸುದ್ದಿಯಾಗಿದ್ದು, ಇಲ್ಲಿ ಇಸ್ಲಾಂ ನ ಪವಿತ್ರ ಗ್ರಂಥವಾಗಿರುವ ಕುರಾನ್ ನ ಪ್ರತಿಗಳನ್ನು ಸುಟ್ಟು ಹಾಕಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಇದೀಗ ಇರಾಕ್ ಮತ್ತು ಸ್ವೀಡನ್ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಶುರುವಾಗಿದೆ. ಸ್ವೀಡನ್ ಸರ್ಕಾರವು ಕುರಾನ್ ಸುಡಲು ಅನುಮತಿ ಕೊಟ್ಟ ನಿರ್ಧಾರವನ್ನು ವಿರೋಧಿಸಿ, ಇರಾಕ್ ರಾಜಧಾನಿ ಆಗಿರುವ ಬಾಗ್ದಾದ್ ನಗರದಲ್ಲಿ ಸ್ವೀಡನ್ ರಾಯಭಾರ ಕಚೇರಿಗೆ ನುಗ್ಗಿದಂತಹ ನೂರಾರು ಜನರು ಅಲ್ಲಿ ದಾಂಧಲೆ ಎಬ್ಬಿಸಿ ಬೆಂಕಿ ಹಾಕಿದ್ದಾರೆ.
ಈ ಘಟನೆಯ ಬೆನ್ನಲ್ಲೇ ಇರಾಕ್ ನ ಸರ್ಕಾರ ತಮ್ಮ ದೇಶದಿಂದ ಸ್ವೀಡನ್ ರಾಯಭಾರಿಯನ್ನು ಉಚ್ಚಾಟನೆ ಮಾಡುವಂತೆ ಆದೇಶವನ್ನು ಹೊರಡಿಸಿದೆ. ಇದೇ ವೇಳೆ ಸ್ವೀಡನ್‌ನಲ್ಲಿರುವ ತನ್ನ ರಾಯಭಾರಿಗಳನ್ನು ಇರಾನ್ ಈಗ ಹಿಂತೆಗೆದುಕೊಂಡಿದೆ. ಗುರುವಾರದಂದು ಸ್ವೀಡನ್ ನಲ್ಲಿ ಇರುವ ಇರಾಕ್ ದೂತಾವಾಸ ಕಚೇರಿಯ ಹೊರಭಾಗದಲ್ಲಿ ಪ್ರತಿಭಟನಾಕಾರರು ಕುರಾನ್ ಪ್ರತಿಗಳನ್ನು ಕಾಲಿನಲ್ಲಿ ಒದ್ದಿದ್ದರು.
ಅಲ್ಲದೇ ಇರಾಕ್ ನ ಧ್ವಜ ಹಾಗೂ ಅವರ ಧಾರ್ಮಿಕ ವ್ಯಕ್ತಿಯ ಚಿತ್ರಗಳನ್ನು ತುಳಿಯುವುದರ ಮೂಲಕ ಇರಾಕಿನ ಜನರ ಆಕ್ರೋಶಕ್ಕೆ ಕಾರಣವಾಗಿದ್ದರು. ಟರ್ಕಿ ಕೂಡಾ ಈ ಘಟನೆಯ ಕುರಿತಾಗಿ ಖಂಡನೆಯನ್ನು ಮಾಡಿದೆ. ಇಸ್ಲಾಂ ವಿರುದ್ಧದ ಇಂತಹ ದ್ವೇಷದ ಅಪರಾಧವನ್ನು ತಡೆಯಲು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಟರ್ಕಿ ಸ್ವೀಡನ್ ಗೆ ಕರೆಯನ್ನು ನೀಡಿದೆ.