ಪಬ್ಜಿ ಮೂಲಕ ಪರಿಚಿಯವಾದ ವ್ಯಕ್ತಿಯನ್ನು ಪ್ರೀತಿಸಿ ಆತನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಸೀಮಾ ಹೈದರ್ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳಾಗಿವೆ. ಆ ಸುದ್ದಿಗಳಲ್ಲಿ ಒಂದು ಸುದ್ದಿಯಂತೂ ಸಿಕ್ಕಾಪಟ್ಟೆ ಸದ್ದನ್ನು ಮಾಡಿತ್ತು. ಹೌದು, ಸೀಮಾ ಹೈದರ್ ಅವರ ಪ್ರೇಮಕಥೆಯನ್ನು ಆಧಾರವಾಗಿ ಇಟ್ಟುಕೊಂಡು ಬೆಳ್ಳಿ ತೆರೆಯ ಮೇಲೆ ಅದನ್ನು ಸಿನಿಮಾ ರೂಪದಲ್ಲಿ ತರಲು ನಿರ್ಮಾಣ ಸಂಸ್ಥೆಯೊಂದು ಮುಂದಾಗಿದ್ದು, ಈಗ ಚಿತ್ರೀಕರಣ ನಿಲ್ಲಿಸುವ ಆಗ್ರಹಗಳು ಕೇಳಿ ಬಂದಿದೆ.
ಸೀಮಾ ಹೈದರ್ ಕಥೆಯನ್ನಾಧರಿಸಿದ ಸಿನಿಮಾದ ಚಿತ್ರೀಕರಣವನ್ನು ಕೂಡಲೇ ನಿಲ್ಲಿಸುವಂತೆ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಪಟ್ಟು ಹಿಡಿದಿದೆ. ಅಲ್ಲದೇ ಇದೇ ವೇಳೆ ಈ ಡ್ರಾಮ ಇಲ್ಲಿಗೇ ನಿಲ್ಲದೇ ಹೋದಲ್ಲಿ ಮುಂದಿನ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗುವಂತೆ ಚಿತ್ರತಂಡಕ್ಕೆ ಎಚ್ಚರಿಕೆಯನ್ನು ನೀಡಲಾಗಿದೆ. ಒಂದು ಕಡೆ ಸೀಮಾಳನ್ನು ಆಕೆಯ ದೇಶಕ್ಕೆ ವಾಪಸ್ಸು ಕಳಿಸಿ ಎನ್ನುವ ಕೂಗು ಕೇಳಿ ಬರುತ್ತಿದೆ.
ಆದರೆ ಇದೇ ವೇಳೆ ನೋಯ್ಡಾದ ಅಮಿತ್ ಜೈನ್ ಎನ್ನುವವರು ಮಾತ್ರ ಸೀಮಾ ಮತ್ತು ಸಚಿನ್ ಪ್ರೇಮಕಥೆಯನ್ನು ಸಿನಿಮಾ ಮಾಡಿ ಜಗತ್ತಿಗೆ ತಿಳಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಅಲ್ಲದೇ ಅಮಿತ್ ಜೈನ್ ಅವರು ಈ ಸಿನಿಮಾದಲ್ಲಿ ನಟಿಸಲು ಸೀಮಾ ಹೈದರ್ ಬಳಿ ಮಾತನಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಎಂಎನ್ಎಸ್ ಆಕ್ಷೇಪವನ್ನು ವ್ಯಕ್ತಪಡಿಸಿದ್ದು, ಭಾರತೀಯ ಸಿನಿಮಾಗಳಲ್ಲಿ ಪಾಕಿಸ್ತಾನಿಗಳಿಗೆ ಜಾಗವಿಲ್ಲ ಎಂದಿದೆ.