ತೆಲುಗು ಸಿನಿಮಾ ರಂಗದ ಸ್ಟಾರ್ ನಟಿ ಸಮಂತಾ (Samantha) ದೂರದ ಬಾಲಿಯಲ್ಲಿ ರಜೆಯನ್ನು ಎಂಜಾಯ್ ಮಾಡುವಾಗಲೇ ಇಲ್ಲೊಂದು ಸುದ್ದಿಯು ದೊಡ್ಡ ಮಟ್ಟದಲ್ಲಿ ಹರಿದಾಡಿದೆ. ನಟಿ ಸಮಂತಾ ತಮಗಿರುವಂತಹ ಅಪರೂಪದ ಕಾಯಿಲೆ ಮೈಯೋಸಿಟಿಸ್ (Myositis) ನ ಚಿಕಿತ್ಸೆಗಾಗಿ ನಟನೊಬ್ಬರಿಂದ ಒಂದು ಎರಡಲ್ಲಾ ಬರೋಬ್ಬರಿ 25 ಕೋಟಿ ರೂಪಾಯಿ ಸಾಲ ಮಾಡಿದ್ದಾರೆಂದು, ಸುದ್ದಿಯಾಗಿತ್ತು. ಬಹುತೇಕ ಎಲ್ಲಾ ಪ್ರಮುಖ ಮಾದ್ಯಮಗಳ ಮುಖ್ಯ ಸುದ್ದಿಯಾಗಿ ಇದು ಚರ್ಚೆಗೆ ಕಾರಷವಾಯಿತು.
ಆದರೆ ಈಗ ಇದೊಂದು ಸುಳ್ಳು ಸುದ್ದಿ ಎಂಬುದಾಗಿ ಸ್ವತಃ ಸಮಂತಾ ಅವರು ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ಒಂದರ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಟಿಯು ಸಾಲ ಮಾಡಿ ಚಿಕಿತ್ಸೆ ಪಡೆಯುವಂತಹ ದುಸ್ಥಿತಿಯಲ್ಲಿ ನಾನಿಲ್ಲ ಎನ್ನುವ ಮಾತನ್ನು ಸಹಾ ಹೇಳಿದ್ದಾರೆ. ನಟಿ ಸಾಲ ಮಾಡಿದ್ದಾರೆ ಎನ್ನುವ ವಿಷಯ ಎಲ್ಲಾ ಕಡೆ ಹರಿದಾಡಿರುವುದು ನಟಿಯ ಗಮನಕ್ಕೆ ಬಂದಿದ್ದು, ಕೂಡಲೇ ಅವರು ತಮ್ಮ ಪೋಸ್ಟ್ ಮೂಲಕ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
ಸಮಂತಾ ತಮ್ಮ ಪೋಸ್ಟ್ ನಲ್ಲಿ, ನನಗಿರೋ ಕಾಯಿಲೆಗೆ ಚಿಕಿತ್ಸೆ ಪಡೆಯಲು ನಾನು 25 ಕೋಟಿ ರೂಪಾಯಿ ಸಾಲ ಮಾಡಿದ್ದೇನೆ ಎನ್ನುವುದು ನಿಜವಲ್ಲ. ಈ ಕಾಯಿಲೆಯ ಚಿಕಿತ್ಸೆಗೆ ಅಷ್ಟು ಹಣದ ಸ್ವಲ್ಪ ಭಾಗವಷ್ಟೇ ನಾನು ಖರ್ಚು ಮಾಡುತ್ತಿದ್ದೇನೆ. ನನಗಿರೊ ಕಾಯಿಲೆ ದೊಡ್ಡದೇನೂ ಅಲ್ಲ. ಸಾವಿರಾರು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗೆ ಮನಸ್ಸಿಗೆ ಬಂದಂತೆ ಪೋಸ್ಟ್ ಮಾಡುವ ಬದಲು ಆಲೋಚಿಸಿ ಎಂದು ಬರೆದುಕೊಂಡಿದ್ದಾರೆ.