ದೇಶದ ಕೆಲವೆಡೆ ಈಗ ಮುಂಗಾರು ಮಳೆಯು ಆರಂಭವಾಗಿದ್ದು, ಮಳೆಗಾಲದ ಶುಭಾರಂಭ ಆಗ್ತಿದೆ. ಆದರೆ ಇಷ್ಟು ಸುಡುಬಿಸಿಲಿನ ನಂತರ ಬರುವ ಈ ಮುಂಗಾರು ತನ್ನ ಜೊತೆಗೆ ಕೆಲವೊಂದು ರೋಗಗಳನ್ನು ಸಹಾ ತಂದೊಡ್ಡುವ ಸಾಧ್ಯತೆಗಳು ಇರುತ್ತವೆ. ಮಳೆಗಾಲ ಎಂದ ಕೂಡಲೇ ಸಹಜವಾಗಿಯೇ ನಾವು ನಮ್ಮ ಆರೋಗ್ಯದ ಕಡೆಗೆ ಸ್ವಲ್ಪ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ರೋಗಗಳು ಬೇಗ ಹರಡುವ ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ಜಾಗರೂಕರಾಗಿರಬೇಕು.
ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಈ ಋತುವಿನಲ್ಲಿ ಬಹಳ ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ವಾಸ್ತವವಾಗಿ, ಮಾನ್ಸೂನ್ ನಲ್ಲಿ ಬೀಳುವ ಹೆಚ್ಚು ಮಳೆಯಿಂದಾಗಿ, ಹಲವು ರೀತಿಯ ಕೀಟಗಳು ಹೊರಗೆ ಬರಲು ಆರಂಭ ಮಾಡಿ ಬಿಡುತ್ತವೆ. ಇದರಿಂದ ಜನರಿಗೆ ಸೋಂಕಿನ ಭೀತಿ ಕಾಡುತ್ತದೆ. ಆದ್ದರಿಂದ ನಾವು ನಿಮಗೆ ಮಾನ್ಸೂನ್ ನಲ್ಲಿ ಆರೋಗ್ಯ ರಕ್ಷಣೆಗೆ ಅನುಸರಿಸಬೇಕಾದ ಕೆಲವು ಸಲಹೆಗಳನ್ನು ನೀಡಲಿದ್ದೇವೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಸೇವಿಸಿ : ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾದರೆ ಬಹಳ ಸುಲಭವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಆದ್ದರಿಂದಲೇ, ಶುಂಠಿ, ಬೆಳ್ಳುಳ್ಳಿ, ಕೋಸು, ಕ್ಯಾರೆಟ್ ಮತ್ತು ಅರಿಶಿನದಂತಹ ವಸ್ತುಗಳು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನೀವು ಈ ವಸ್ತುಗಳನ್ನು ಸೇವನೆಯ ಮೂಲಕ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು.
ಸೊಳ್ಳೆಗಳ ಬಗ್ಗೆ ಎಚ್ಚರವಹಿಸಿ: ಮಳೆ ಬಂದಾಗ ಎಲ್ಲೆಲ್ಲೂ ನೀರು ಸಾಮಾನ್ಯ, ಇಂತಹ ಪರಿಸ್ಥಿತಿಯಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳ ಸಂತತಿ ಹೆಚ್ಚುತ್ತದೆ. ಇದರಿಂದ ಡೆಂಗ್ಯೂ ಮಲೇರಿಯಾದಂತಹ ರೋಗಗಳ ಅಪಾಯ ಇರುತ್ತದೆ. ಆದ ಕಾರಣ ಎಲ್ಲೆಂದರಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರವಹಿಸಿ ಮತ್ತು ಪೂರ್ಣ ತೋಳಿನ (full sleeve) ಬಟ್ಟೆಗಳನ್ನು ಧರಿಸಿ ಮತ್ತು ಮನೆಯಲ್ಲಿ ಸೊಳ್ಳೆ ಪರದೆಯನ್ನು ಬಳಸಿ.
ಹೊರಗಿನ ತಿನಿಸುಗಳ ಸೇವನೆ ಕಡಿಮೆ ಮಾಡಿ: ಬಹಳಷ್ಟು ಜನರಿಗೆ ಹೊರಗಿನ ತಿಂಡಿಗಳು ಬಲು ಪ್ರಿಯ. ಆದರೆ ಮಳೆಗಾಲದಲ್ಲಿ ಸಾಧ್ಯವಾದಷ್ಟು ಹೊರಗಿನ ಆಹಾರ ಸೇವನೆ ಕಡಿಮೆ ಮಾಡಿ. ಅದೇ ವೇಳೆ ಕರಿದ ಆಹಾರವನ್ನು ಸೇವಿಸುವುದನ್ನು ಕಡಿಮೆ ಮಾಡಿ. ಅಲ್ಲದೇ ಹೊರಗಿನಿಂದ ತಂದ ಹಣ್ಣು, ತರಕಾರಿಗಳನ್ನು ಚೆನ್ನಾಗಿ ತೊಳೆದ ನಂತರವೇ ತಿನ್ನಿ. ಎಲ್ಲಕ್ಕಿಂತ ಮುಖ್ಯವಾಗಿ ತೆರೆದಿಟ್ಟ, ಕತ್ತರಿಸಿಟ್ಟ ವಸ್ತುಗಳನ್ನು ಸೇವಿಸಬೇಡಿ.
ಚರ್ಮದ ಆರೈಕೆಯನ್ನು ಮಾಡೋದು ಮರೆಯಬೇಡಿ: ಮಳೆಗಾಲದಲ್ಲಿ ಚರ್ಮದ ಸೋಂಕು, ಅಲರ್ಜಿ ಕೂಡಾ ಸಾಮಾನ್ಯವಾದ ವಿಚಾರವಾಗಿದೆ. ಆದ್ದರಿಂದಲೇ ಸಾಧ್ಯವಾದಷ್ಟು ನೀವು ಮಳೆಯಲ್ಲಿ ತೋಯುತ್ತಾ, ಒದ್ದೆಯಾದರೆ, ಶುದ್ಧ ನೀರಿನಿಂದ ಸ್ನಾನ ಮಾಡಿದ ನಂತರ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ.
ಸಾಕಷ್ಟು ನಿದ್ರೆಯನ್ನು ಮಾಡಿರಿ : ಬಹಳಷ್ಟು ಜನರು ತಡರಾತ್ರಿಯವರೆಗೆ ಎಚ್ಚರವಾಗಿರುವುದನ್ನು ಅಭ್ಯಾಸವನ್ನು ಹೊಂದಿರುತ್ತಾರೆ. ಇದರಿಂದ ಸಹಜವಾಗಿಯೇ ಅವರಲ್ಲಿ ರೋಗನಿರೋಧಕ ಶಕ್ತಿ ದುರ್ಬಲವಾಗುತ್ತದೆ. ಆದ್ದರಿಂದಲೇ ಸಾಧ್ಯವಾದಷ್ಟು ಸೂಕ್ತ ಅವಧಿಯವರೆಗೆ ಸಾಕಷ್ಟು ನಿದ್ರೆ ಮಾಡಿರಿ. ಅಂದರೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡಿ.